ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದಾಳಿಂಬೆ ರೈತನಿಗೆ ದುಂಡಾಣು ಬರೆ

Rashmi Kasaragodu
Updated On : 19 Jun 2014, 12:12 pm

ವಿಶೇಷ ವರದಿ
ಮುದಗಲ್: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಪ್ರಗತಿಪರ ರೈತರು ಬೆಳೆದ ದಾಳಿಂಬೆ ಬೆಳೆಗೆ ದುಂಡಾಣು ರೋಗ ಕಾಣಿಸಿಕೊಂಡಿದ್ದು, ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ.
ಕೊಳವೆಬಾವಿಗಳನ್ನು ಆಶ್ರಯಿಸಿ ಬೆಳೆಯಲಾದ ದಾಳಿಂಬೆ ಬೆಳೆಗೆ ಏಕಾಏಕಿಯಾಗಿ ದುಂಡಾಣು ರೋಗ ವಕ್ಕರಿಸಿದೆ. ರೋಗ ನಿಯಂತ್ರಣಕ್ಕಾಗಿ ಯಾವುದೇ ಔಷಧ ಉಪಯೋಗಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ ಎಂದು ರೈತರು ಗೋಳಾಡುತ್ತಿದ್ದಾರೆ.
ರೋಗದ ಲಕ್ಷಣ: ಮುಡಲದಿನ್ನಿ, ಯರದಿಹಾಳ, ಮರಳಿ, ವ್ಯಾಕರನಾಳ, ಮಟ್ಟೂರ, ಕನ್ನಾಳ, ನಾಗರಾಳ, ಬಯ್ಯಾಪುರ, ಭೋಗಾಪುರ ಸೇರಿದಂತೆ ಪಟ್ಟಣ ಸುತ್ತಮುತ್ತಲಿನ ಕೆಲ ರೈತರು ಬೆಳೆದಿರುವ ದಾಳಿಂಬೆಗೆ ದುಂಡಾಣು ರೋಗ ಕಾಣಿಸಿಕೊಂಡಿದ್ದು ಕಾಯಿಗಳು ಬಿರಕು ಬಿಟ್ಟು ಎರಡು ಹೋಳಾಗಾಗುತ್ತಿವೆ. ದಾಳಿಂಬೆ ಮೇಲೆ ಚುಕ್ಕಿಚುಕ್ಕಿಯ ಕಪ್ಪು ಬಣ್ಣ ಬಿದ್ದಂತೆ ಕಾಣುತ್ತದೆ. ಗಿಡವೆಲ್ಲ ಹಳದಿ ಬಣ್ಣಕ್ಕೆ ತಿರುಗಿ ಒಣಗಿ ನಿಲ್ಲುತ್ತದೆ. ಮಳೆ ಬಾರದೆ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ ದಾಳಿಂಬೆ ಗಿಡಗಳು ಬಾಡಿರುವುದು ಒಂದಡೆಯಾದರೆ, ರೋಗದಿಂದ ದಾಳಿಂಬೆ ಬೆಳೆ ಕೈಕೊಟ್ಟಿರುವುದು ರೈತರಿಗೆ ಮತ್ತಷ್ಟು ಸಾಲಕ್ಕೆ ಗುರಿಯಾಗುವಂತೆ ಮಾಡಿದೆ.
ಖರೀದಿಗೆ ಮುಂದಾಗುತ್ತಿಲ್ಲ: ಪಟ್ಟಣ ಸಮೀಪದ ಕನ್ನಾಳ ಹೊರವಲಯದ ಹೊಲವೊಂದರಲ್ಲಿ ಆಂಧ್ರ ಮೂಲದ ಮಲಕರೆಡ್ಡಿ ಎಂಬ ರೈತ ತನ್ನ 10 ಎಕರೆ ಜಮೀನಿನಲ್ಲಿ ಬೆಳೆಯಾಲಾದ ದಾಳಿಂಬೆ ಬೆಳೆಗೆ ದುಂಡಾಣು ರೋಗ ಕಾಣಿಸಿಕೊಂಡಿದ್ದು ಗಿಡದಿಂದ ಬಿಡಿಸಲಾದ ದಾಳಿಂಬೆಗೆ ದುಂಡಾಣು ರೋಗ ಕಾಣಿಸಿಕೊಂಡಿದ್ದರಿಂದ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ. ಕಳೆದ ಸಾಲಿನಲ್ಲಿ ಈ ವೇಳೆಗೆ ದಾಳಿಂಬೆ ಬೆಳೆಗಾರರು ಒಂದು ಉತ್ತಮ ಪೈರು ಪಡೆದು ಸಾಕಷ್ಟು ಹಣ ಗಳಿಸಿದ್ದರು. ಆದರೆ ಈ ಬಾರಿ ಒಂದೆಡೆ ಬರ ಆವರಿಸಿದರೆ ಮತ್ತೊಂದೆಡೆ ದಾಳಿಂಬೆಗೆ ರೋಗ ಕಾಣಿಸಿಕೊಂಡಿದೆ. ಹೀಗಾಗಿ ರೈತರು ಮಾಡಿದ ಸಾಲ ತೀರಿಸಲಾಗುತ್ತಿಲ್ಲ ಎನ್ನುತ್ತಿದ್ದಾರೆ. ಆದ್ದರಿಂದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ದುಂಡಾಣು ರೋಗ ಹತೋಟಿ ಬಗ್ಗೆ ಮಾಹಿತಿ ನೀಡಿ ಔಷಧ ಉಪಚಾರದ ಬಗ್ಗೆ ಮಾಹಿತಿ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement