ವ್ಯಾಟ್ ಸಾಫ್ಟ್ ತಂತ್ರಾಂಶ ಕಾರ್ಯಾಗಾರ
ಗುಲ್ಬರ್ಗ: ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕ ವಹಿವಾಟು 50 ಲಕ್ಷ ಮೀರಿದಂತಹ ವರ್ತಕರಿಗೆ ಖರೀದಿ ಮತ್ತು ಮಾರಾಟ ಬಿಲ್ಲುಗಳನ್ನು ವ್ಯಾಟ್ ಸಾಫ್ಟ್ ತಂತ್ರಾಂಶದಲ್ಲಿ ಅಳವಡಿಸುವ ಕುರಿತಾಗಿ ಕಾರ್ಯಾಗಾರ ನಡೆಯಿತು. ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಸಿದ್ಧಪ್ಪ, ಮಹಮ್ಮದ ಮಸ್ಲಿ ಉದ್ದೀನ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರಾಧಾಕೃಷ್ಣ ರಘೋಜಿ, ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರ ಸಂಘ ಅಧ್ಯಕ್ಷ ಎಲ್.ಬಿ. ಬನ್ನಿಕೊಪ್ಪ, ಉದ್ಯಮಿ ನಿತೀನ್ ಗುತ್ತೇದಾರ ಮುಂತಾದವರು ಇದ್ದರು.
ಅಭಿವೃದ್ಧಿ ನಿಗಮ ಯೋಜನೆ ಅರ್ಜಿ ಆಹ್ವಾನ
ರಾಯಚೂರು: ಜಿಲ್ಲೆಯಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗದ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಪ್ರಯೋಜನಕ್ಕೆ ಅರ್ಜಿ ಕರೆಯಲಾಗಿದೆ. ಸ್ವಯಂ ಉದ್ಯೋಗ ಯೋಜನೆ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ ಮತ್ತು ಸಾಮೂಹಿಕ ಏತನೀರಾವರಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಉದ್ಯಮಶೀಲತಾಭಿವೃದ್ಧಿ ಯೋಜನೆಗಳಡಿ ಆಸಕ್ತರು ಅರ್ಜಿ ಸಲ್ಲಿಸಬಹುದು. ಆಸಕ್ತರು ಜಾತಿ- ಆದಾಯ ಪ್ರಮಾ ಪತ್ರ, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಅಥವಾ ಆಧಾರ್ ಕಾರ್ಡ್, ಪಹಣಿ ಪ್ರಸ್ತುತ ಸಾಲಿನದು, ಇತ್ತೀಚಿನ 3 ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಈ ಹಿಂದೆ ಮೇಲಿನ ಯೋಜನೆಗಳಲ್ಲಿ ಸೌಲಭ್ಯ ಪಡೆದವರು ಅರ್ಹರಲ್ಲ. ಈಗಾಗಲೇ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಜೂ.20ರಿಂದ ಜು.19ರವರೆಗೆ ನಿಗಮದ ಜಿಲ್ಲಾ ಕಚೇರಿಗಳಲ್ಲಿ ಅರ್ಜಿಯನ್ನು ಉಚಿತವಾಗಿ ಪಡೆಯಬಹುದು. ಅರ್ಜಿ ಸಲ್ಲಿಕೆಗೆ ಜು.19 ಕಡೆ ದಿನ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ತಿಳಿಸಿದೆ.
ಉಚಿತ ತಪಾಸಣಾ ಶಿಬಿರ
ಸಿಂಧನೂರು: ಬಡ ಮಕ್ಕಳಿಗೆ ಪುಸ್ತಕ ನೀಡುವ ಮತ್ತು ಆರ್ಥಿಕ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವವರ ಕಣ್ಣೀರು ಒರೆಸುವ, ಅಸಹಾಯಕರಿಗೆ ಸಹಾಯ ನೀಡುವ ಮೂಲಕ ಹೆತ್ತವರಿಗೆ ಶ್ರದ್ಧೆ ತೋರಿಸಬೇಕಾದ ಗುಣ ಪ್ರತಿಯೊಬ್ಬರಲ್ಲಿ ಬರಬೇಕಾಗಿದೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕರೆ ನೀಡಿದರು.
ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ದಿ. ಕೆ. ನಾಗಪ್ಪ ಸ್ಮರಣಾರ್ಥ ಬುಧವಾರ ಏರ್ಪಡಿಸಿದ್ದ ಹೃದ್ರೋಗ, ಕ್ಯಾನ್ಸರ್, ಸಕ್ಕರೆ ಕಾಯಿಲೆ ತಪಾಸಣೆ ಹಾಗೂ ಉಚಿತ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ಕನಕಗುರು ಪೀಠದ ಗುಲ್ಬರ್ಗ ವಿಭಾಗದ ಸಿದ್ದರಾಮಾನಂದಪುರಿ ಸ್ವಾಮೀಜಿ, ನಂಜುಂಡಯ್ಯ ಗುರುವಿನ್, ಜಿ.ಪಂ. ಮಾಜಿ ಸದಸ್ಯ ಕೆ. ಕರಿಯಪ್ಪ, ಮುದಗಲ್ ಕಲ್ಯಾಣ ಆಶ್ರಮದ ಮಹಾಂತಸ್ವಾಮಿ ಸಾಲಿಮಠ, ಜಾತಿ ನಿರ್ಮೂಲನಾ ಚಳವಳಿಯ ರಾಜ್ಯ ಸಂಚಾಲಕ ಎಚ್.ಎನ್. ಬಡಿಗೇರ, ನಗರಸಭೆ ಸದಸ್ಯ ಕೆ. ಮರಿಯಪ್ಪ, ಚಿದಾನಂದ ಗುರುವಿನ್, ವೀರಣ್ಣ ಗೋಮರ್ಸಿ, ಹೊಸಗೇರಪ್ಪ ಸುಕಾಲಪೇಟೆ, ಗವಿಸಿದ್ದಪ್ಪ ಕಾನಿಹಾಳ, ಬಾಬರ್ ಪಾಷಾ ಇದ್ದರು. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ತಜ್ಞ ವೈದ್ಯರನ್ನು ಸನ್ಮಾನಿಸಲಾಯಿತು.