ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಮಸ್ಯೆಗಳಿಗೆ ನಮೋಶಿಯಿಂದ ಪರಿಹಾರ: ಬಸನಗೌಡ ವಿಶ್ವಾಸ

Rashmi Kasaragodu
Updated On : 19 Jun 2014, 12:05 pm

ರಾಯಚೂರು: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಶಿಲ್ ನಮೋಶಿ ಅವರು ಶಿಕ್ಷಕರ ಸಮಸ್ಯೆಗಳನ್ನು ಅರಿತವರಾಗಿದ್ದು, ಅವರಿಗೆ ಶಿಕ್ಷಕರಿಂದ ಬೆಂಬಲ ವ್ಯಕ್ತವಾಗಿದೆ. ಬಿಜೆಪಿ ಗೆಲವು ನಿಶ್ಚಿತ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸನಗೌಡ ಬ್ಯಾಗವಾಟ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಈಶಾನ್ಯ ಕ್ಷೇತ್ರದಲ್ಲಿ ಅನೇಕ ಬಾರಿ ಆಯ್ಕೆಯಾಗಿ ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿದೆ. ಅದರಲ್ಲೂ ಹಾಲಿ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಅವರು ಮೂರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಅಪಾರ ಅನುಭವ ಗಳಿಸಿದ್ದಾರೆ. ಶಿಕ್ಷಕರ ಪ್ರತಿಯೊಂದೂ ಬೇಕು-ಬೇಡಗಳಿಗೆ ತುರ್ತು ಸ್ಪಂದಿಸಿದ್ದಾರೆಂದು ಹೇಳಿದರು.
ಕಾಂಗ್ರೆಸ್ ಅನಗತ್ಯ ಗೊಂದಲದ ಹೇಳಿಕೆ: ಈಶಾನ್ಯ ಕ್ಷೇತ್ರದಲ್ಲಿ ಅಭ್ಯರ್ಥಿಯ ಹೆಸರು ಅಂತಿಮಗೊಳಿಸುವಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಂಡಿದೆ. ಶಶಿಲ್ ನಮೋಶಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು. ಆದರೆ ಅವರು ಮತ್ತೆ ಪಕ್ಷಕ್ಕೆ ಮರಳಿದ್ದಾರೆ. ಅವರ ಮೇಲೆ ಪಕ್ಷಕ್ಕೆ ವಿಶ್ವಾಸವಿರುವುದರಿಂದಲೇ ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.
ಹೈ.ಕ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಅವರು ಸಂಸ್ಥೆಯ ಬೋಧಕ ವರ್ಗದವರಿಗೆ ವೇತನ ಪಾವತಿಸಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹೈ.ಕ. ಶಿಕ್ಷಣ ಸಂಸ್ಥೆಯು ಖಾಸಗಿ ಸಂಸ್ಥೆಯಾಗಿದೆ. ಆ ಸಂಸ್ಥೆಯಲ್ಲಿ ಯಾವುದೇ ರೀತಿಯ ವೇತನ ಬಾಕಿ ಬಗ್ಗೆ ದೂರುಗಳಿಲ್ಲ. ಕಾಂಗ್ರೆಸ್ ಅನಗತ್ಯ ಗೊಂದಲದ ಹೇಳಿಕೆ ನೀಡುತ್ತಿದೆ ಎಂದು ಆರೋಪಿಸಿದರು.
ಆರೋಪಗಳು ಹುರುಳಿಲ್ಲದ್ದು: ನಮೋಶಿ ಅವರು ಈಶಾನ್ಯ ಕ್ಷೇತ್ರದ ಶಿಕ್ಷಕರು ಸೇರಿದಂತೆ ವಿವಿಧ ವಿಷಯಗಳ ಕುರಿತು ಹೋರಾಟ ನಡೆಸಿದ್ದಾರೆ. ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅನೇಕ ಸಮಸ್ಯೆಗಳ ಪರಿಹಾರಕ್ಕೂ ಕಾರಣರಾಗಿದ್ದಾರೆಂದ ಅವರು, ಕ್ಷೇತ್ರದಲ್ಲಿ ಬಿಜೆಪಿ ಪರ ಒಲವಿದ್ದು, ನಮೋಶಿ ಗೆಲ್ಲಲಿದ್ದಾರೆಂದು ಹೇಳಿದರು.
ಕಳೆದ ಅವಧಿಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವೇಳೆ ಜಿಲ್ಲೆಗೆ ಆಗಿರಬಹುದಾದ ಅನುದಾನ ಹಂಚಿಕೆಯ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ ತಾವು ಅಭ್ಯರ್ಥಿಯೊಂದಿಗೆ ಚರ್ಚಿಸಿ ಪರಿಹರಿಸುವುದಾಗಿ ತಿಳಿಸಿದ ಅವರು, ಹೈ.ಕ. ಶಿಕ್ಷಣ ಸಂಸ್ಥೆಯಲ್ಲಿ ವೇತನ ಬಾಕಿ ಕುರಿತ ಆರೋಪಗಳು ಹುರುಳಿಲ್ಲದ್ದು. ಸಂಸ್ಥೆಯ ಆರ್ಥಿಕ ಸ್ಥಿತಿಗತಿಯೇ ಅಂಥ ಸಮಸ್ಯೆಗಳಿಗೆ ದಾರಿ ಮಾಡುತ್ತದೆಯೇ ವಿನಾ ನಮೋಶಿ ಅವರು ಅಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರು ಬೆಂಗಳೂರಿನಲ್ಲಿ ವಾಸವಾಗಿದ್ದು, ಅವರನ್ನು ರಾಯಚೂರು ಜಿಲ್ಲೆಯವರು ಎಂದು ಹೇಳಲಾಗದು. ಆದರೆ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಗುಲ್ಬರ್ಗದವರಾಗಿದ್ದು ಮತದಾರರ ಬಳಿಯೇ ಲಭ್ಯವಿರಲಿದ್ದಾರೆಂದು ಹೇಳಿಕೊಂಡರು.
ನೀರಿನ ಕೊರತೆ: ತುಂಗಭದ್ರಾ ಜಲಾಶಯದಲ್ಲಿ ಕುಡಿಯುವ ನೀರಿಗೆ ಬೇಕಿರುವಷ್ಟು ನೀರು ಸಂಗ್ರಹವಿದ್ದು, ಸರ್ಕಾರ ಕೂಡಲೇ ಆ ನೀರನ್ನು ನಗರದ ಜನತೆಗೆ ಒದಗಿಸುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಬೇಕು. ಜಲಾಶಯದಿಂದ ಕುಡಿಯುವ ನೀರಿನ ಕೆರೆಗಳ ಭರ್ತಿಗೆ ಈಗಲೇ ಮುಂದಾಗಬೇಕು. ಪ್ರಸಕ್ತ ಮುಂಗಾರು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಕೊರತೆ ನಿವಾರಿಸಲು ಈ ಕ್ರಮ ತುರ್ತು ಪರಿಗಣಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನರಸಪ್ಪ ಯಕ್ಲಾಸಪುರ, ಬಂಡೇಶ್ ವಲ್ಕಂದಿನ್ನಿ, ಗಿರೀಶ್ ಕನಕವೀಡು, ಆಂಜಿನೇಯ್ಯ ಯಕ್ಲಾಸಪುರ, ಬಂಗಿ ನರಸರೆಡ್ಡಿ, ಆಂಜಿನೇಯ್ಯ ಕಡಗೋಲು ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement