ಕೊಲೆ ಆರೋಪಿಗಳಿಗೆ ಶಿಕ್ಷೆ
ಲಿಂಗಸ್ಗೂರು: ತಾಲೂಕಿನ ಗೋನವಾಟ್ಲ ತಾಂಡಾದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲೆಯಲ್ಲಿ ಮೇಲಿಂದ ಮೇಲೆ ಜರುಗುತ್ತಿರುವ ಇಂತಹ ದುರ್ಘಟನೆಯಿಂದ ಪ್ರಜ್ಞಾವಂತ ನಾಗರಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಿನಿಮಾ, ಇಂಟರ್ನೆಟ್, ಮೊಬೈಲ್, ವಿದ್ಯುನ್ಮಾನ ಮಾಧ್ಯಮಗಳು ವ್ಯಾಪಕವಾಗಿ ಹರಡುತ್ತಿರುವ ಅಶ್ಲೀಲತೆ ಪ್ರಸಾರ ಪ್ರಚೋದನೆಗೆ ಕಾರಣವಾಗಿವೆ. ಇಂತಹ ದೃಶ್ಯಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಿ ನ್ಯಾಯಮೂರ್ತಿ ವರ್ಮಾ ಆಯೋಗದ ಶಿಫಾರಸು ಜಾರಿ ಮಾಡಬೇಕೆಂದು ಒತ್ತಾಯಿಸಿದರು. ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳಿಗೆ ಜಾಮಿನು ನೀಡದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಶ್ಲೀಲ ಚಿತ್ರಗಳ ಪ್ರದರ್ಶನ ಪ್ರಸಾರದ ವಿದ್ಯುನ್ಮಾನ ತಂತ್ರಜ್ಞಾನ ತಡೆಯಬೇಕೆಂದು ಒತ್ತಾಯಿಸಿದರು. ಎಐಡಿವೈಒ ಜಿಲ್ಲಾಧ್ಯಕ್ಷ ಶರಣಪ್ಪ ಉದ್ಬಾಳ, ಸರೋಜಾ, ತಿರುಪತಿ, ಬಾಲಾಜಿ, ಬಸನಗೌಡ, ಅಮರೇಶ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ತಹಸೀಲ್ದಾರ್ ರಾಧೇಶ್ಯಾಮ್ರಿಗೆ ಮನವಿ ಸಲ್ಲಿಸಿದರು.