ಜೆಸ್ಕಾಂನಲ್ಲಿ ಸಿಬ್ಬಂದಿ ಕೊರತೆಸಮಸ್ಯೆಗೆ ಪರಿಹಾರ ವಿಳಂಬ
ದೇವದುರ್ಗ: ಜಿಲ್ಲೆಯ ಜೆಸ್ಕಾಂ ಇಲಾಖೆಯಲ್ಲಿ ಶೇ.80ರಷ್ಟು ಸಿಬ್ಬಂದಿ ಕೊರತೆಯಿದ್ದು ಅದರಿಂದಾಗಿ ಸಮರ್ಪಕ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಜೆಸ್ಕಾಂ ಇಇ ಬಸವರಾಜ ಎಸ್.ಎಚ್. ತಿಳಿಸಿದರು.
ಪಟ್ಟಣದ ಜೆಸ್ಕಾಂ ಇಲಾಖೆಯಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕಿನ ಗ್ರಾಹಕರ ಜನಸಂಪರ್ಕ ಸಭೆಯಲ್ಲಿ ಜನರ ಸಮಸ್ಯೆ ಆಲಿಸಿ ಮಾತನಾಡಿ, ತಾಲೂಕಿನಲ್ಲಿ ಗೃಹ ಬಳಕೆಯ 10,230 ಗ್ರಾಹಕರಿದ್ದಾರೆ. 1.54 ಲಕ್ಷ ಬಿಲ್ ಬಾಕಿ ಉಳಿದಿದೆ. ವಾಣಿಜ್ಯ ಸಂಪರ್ಕ ಬಳಕೆದಾರರು 2,440 ಜನರಿದ್ದು, ಇವರಿಂದ 7 ಲಕ್ಷ ಬಾಕಿಯಿದೆ ಎಂದು ತಿಳಿಸಿದರು.
ತಾಲೂಕಿನ ಗ್ರಾಪಂಗಳಿಂದ ಬೀದಿ ದೀಪ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಸಂಪರ್ಕಗಳಿಗೆ ಒಟ್ಟು 28.27 ಕೋಟಿ ಹಣ ಜೆಸ್ಕಾಂಗೆ ಬರಬೇಕಿದೆ ಎಂದು ತಿಳಿಸಿದ ಅವರು, ತಾಲೂಕಿನಲ್ಲಿ ಲೋಡ್ ಶೆಡ್ಡಿಂಗ್ 3 ಫೇಸ್ 7 ಗಂಟೆ, ಸಿಂಗಲ್ ಫೇಸ್ 12 ಗಂಟೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಟಿಸಿ ದುರಸ್ತಿ ಕೇಂದ್ರ: ರಾಜ್ಯ ಸರ್ಕಾರದ ಸೂಚನೆಯಂತೆ ಪ್ರತಿ ತಾಲೂಕಿನಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ ತೆರೆಯಲು ಟೆಂಡರ್ ಕರೆಯಲಾಗಿದೆ. ಎರಡು ಬಾರಿ ಟೆಂಡರ್ ಕರೆದರೂ ದೇವದುರ್ಗ ತಾಲೂಕಿನಲ್ಲಿ ಕೇಂದ್ರ ಆರಂಭಿಸಲು ಯಾರೂ ಆಸಕ್ತಿ ತೋರಿಲ್ಲ ಎಂದು ಮಾಹಿತಿ ನೀಡಿದರು. ರಾಯಚೂರಿನಲ್ಲಿ 2 ಟಿಸಿ ರಿಪೇರಿ ಸೆಂಟರ್‌ಗಳಿದ್ದು, ಅಲ್ಲಿಯೇ ದೇವದುರ್ಗ, ಮಾನವಿ ಮತ್ತು ರಾಯಚೂರು ಗ್ರಾಮೀಣ ಭಾಗದ ಟಿಸಿ ರಿಪೇರಿ ಮಾಡಲಾಗುತ್ತಿದೆ. ಅದರಿಂದಾಗಿ ರೈತರಿಗೆ ಸಮಯಕ್ಕೆ ಸರಿಯಾಗಿ ಟಿಸಿ ನೀಡಲು ವಿಳಂಬವಾಗುತ್ತಿದೆ ಎಂದು ಹೇಳಿದರು.
ಕ್ರಮದ ಭರವಸೆ: ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ದೇವದುರ್ಗದಿಂದ ಹೂವಿನಹೆಡ್ಗಿವರೆಗೆ ಎಕ್ಸ್‌ಪ್ರೆಸ್ ವಿದ್ಯುತ್ ಮಾರ್ಗ ಅಳವಡಿಸಿದ್ದು, ಈ ಮಾರ್ಗಕ್ಕೆ ಬೇರೆಯ ಕಾರ್ಯಗಳಿಗೆ ಸಂಪರ್ಕ ಒದಗಿಸುವಂತಿಲ್ಲ. ಆದರೆ ಸಂಪರ್ಕ ನೀಡಿದ ಬಗ್ಗೆ ದೂರು ಕೇಳಿಬಂದಿದ್ದು, ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರಾಯಚೂರಿನ ಎಇಇ ರಾಜೇಶ್, ದೇವದುರ್ಗದ ಎಇಇ ಕಳಕಪ್ಪ, ಬಿಜೆಪಿ ಮುಖಂಡ ಎಚ್. ಶಿವರಾಜ, ಜೆಇ ಶ್ರೀನಿವಾಸ, ಗುರುನಾನಕ್, ನಾಗರಾಜ ಮಾಡಗಿರಿ ಸೇರಿ ಅನೇಕರಿದ್ದರು.