ಮೇಲ್ಮನೆ ಮತದಾನಕ್ಕೆ ಸಜ್ಜು
ಕ.ಪ್ರ. ವಾರ್ತೆ ರಾಯಚೂರು ಜೂ. 19
ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸದಸ್ಯರ ಆಯ್ಕೆಗೆ ಜೂ.20ರಂದು ನಡೆಯಲಿರುವ ಚುನಾವಣೆಯ ಮತದಾನ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣೆಗಾಗಿ ಜಿಲ್ಲೆಯಲ್ಲಿ ಒಟ್ಟು 17 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಚುನಾವಣೆಗೆ ಮತದಾನವು ಜೂ.20ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ನಡೆಯಲಿದ್ದು, ಈ ಬಾರಿಯ ಚುನಾವಣೆಯಲ್ಲಿ ಒಟ್ಟು 3,993 ಮತದಾರರು ಹಕ್ಕು ಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಈ ಪೈಕಿ ರಾಯಚೂರು ತಾಲೂಕಿನಲ್ಲಿ 1,177 ಪುರುಷರು, 779 ಮಹಿಳಾ ಮತದಾರರು ಸೇರಿ ಒಟ್ಟು 1,956 ಮತದಾರರಿದ್ದಾರೆ.
ಮತದಾನಕ್ಕೆ ವ್ಯವಸ್ಥೆ: ನಗರದ ಎಪಿಎಂಸಿ ಕಟ್ಟಡ, ಕರ್ನಾಟಕ ಸಂಘದ ಆವರಣದಲ್ಲಿರುವ ಬಸವೇಶ್ವರ ಐಟಿ, ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಪಿಯು ಕಾಲೇಜು, ತಾಪಂ ಕಚೇರಿ ಹಾಗೂ ಯರಮರಸ್ ಕ್ಯಾಂಪ್ನಲ್ಲಿರುವ ಸ.ಹಿ.ಪ್ರಾ. ಶಾಲೆ ಸೇರಿ 5 ಕಡೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ದೇವದುರ್ಗ ತಾಲೂಕಿನಲ್ಲಿ ಒಟ್ಟು 267 ಮತದಾರರಿದ್ದು ಅವರಲ್ಲಿ 235 ಪುರುಷ ಹಾಗೂ 32 ಮಹಿಳಾ ಮತದಾರರಿದ್ದಾರೆ. ದೇವದುರ್ಗ ಪಟ್ಟಣದ ತಹಸೀಲ್ದಾರ್ ಕಚೇರಿ ಹಾಗೂ ಅರಕೇರಾ, ಗಬ್ಬೂರು, ಜಾಲಹಳ್ಳಿ ಗ್ರಾಪಂಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಲಿಂಗಸ್ಗೂರು ತಾಲೂಕಿನಲ್ಲಿ ಒಟ್ಟು 567 ಮತದಾರರಿದ್ದು, ಅವರಲ್ಲಿ 441 ಪುರುಷ, 126 ಮಹಿಳಾ ಮತದಾರರಿದ್ದಾರೆ. ಲಿಂಗಸ್ಗೂರು ತಾಲೂಕಿನ 4 ಕಡೆ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಮಾನವಿ ತಾಲೂಕಿನಲ್ಲಿ ಒಟ್ಟು 550 ಮತದಾರರಿದ್ದು ಅವರಲ್ಲಿ 411 ಪುರುಷ, 139 ಮಹಿಳಾ ಮತದಾರರಿದ್ದಾರೆ.
ಸಿಂಧನೂರು ತಾಲೂಕಿನಲ್ಲಿ ಒಟ್ಟು 653 ಮತದಾರರಿದ್ದು ಆ ಪೈಕಿ 497 ಪುರುಷರು ಹಾಗೂ 156 ಮಹಿಳಾ ಮತದಾರರಿದ್ದಾರೆ.
85 ಸಿಬ್ಬಂದಿ ನೇಮಕ: ವಿಧಾನ ಪರಿಷತ್ತಿನ ಚುನಾವಣೆಯ ಮತದಾನ ಕಾರ್ಯಕ್ಕಾಗಿ ತಲಾ 17 ಜನ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಸೇರಿ ಒಟ್ಟು 85 ಸಿಬ್ಬಂದಿ ನೇಮಿಸಲಾಗಿದೆ. 10 ಜನ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. ದೇವದುರ್ಗ ತಾಲೂಕಿನ 4 ಮತಗಟ್ಟೆಗಳಿಗೆ 20, ಲಿಂಗಸ್ಗೂರಿನ 4 ಮತಗಟ್ಟೆಗಳಿಗೆ 20, ಮಾನವಿ ತಾಲೂಕಿನ 3 ಮತಗಟ್ಟೆಗಳಿಗೆ 15, ರಾಯಚೂರಿನ 5 ಮತಗಟ್ಟೆಗಳಿಗೆ 25, ಸಿಂಧನೂರಿನ ಒಂದು ಮತಗಟ್ಟೆಗೆ ಐವರನ್ನು ನೇಮಿಸಲಾಗಿದೆ.
ಬಿಗಿ ಭದ್ರತೆ: ಬಂದೋಬಸ್ತ್ಗಾಗಿ ಇಬ್ಬರು ಪಿಎಸ್ಸೈ, 17 ಜನ ಎಎಸ್ಸೈ, 22 ಜನ ಮುಖ್ಯ ಪೇದೆ, 47 ಜನ ಪೇದೆ ಹಾಗೂ 7 ಜನ ಮಫ್ತಿ ಪೇದೆಗಳು ಸೇರಿ ಒಟ್ಟು 95 ಜನ ಪೊಲೀಸ್ ಸಿಬ್ಬಂದಿ ಭದ್ರತೆ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದೆ.