ರಸ್ತೆ ದುರಸ್ತಿಗೆ ಆಗ್ರಹ
ಲಿಂಗಸ್ಗೂರು: ಲಿಂಗಸ್ಗೂರು-ಸಿಂಧನೂರು ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರಿಗೆ ಸಂಚಾರ ಸವಾಲಾಗಿದೆ. ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ತಹಸೀಲ್ದಾರ್ ರಾಧೇಶ್ಯಾಮ್ ಅವರಿಗೆ ಮನವಿ ಸಲ್ಲಿಸಿದರು. ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ (19) ಯ ಲಿಂಗಸ್ಗೂರು-ಸಿಂಧನೂರು ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, 25 ಕಂದಾಯ ಗ್ರಾಮಗಳ ಜನತೆ ಹಾಗೂ ವಿದ್ಯಾರ್ಥಿಗಳು ತೆರಳಲು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆ ತೇಪೆ ಕೆಲಸಕ್ಕೆಂದು ಲಕ್ಷಾಂತರ ರುಪಾಯಿ ಹಣ ಲೂಟಿ ಮಾಡುವಲ್ಲಿ ತೊಡಗಿದೆ ಎಂದು ಆರೋಪಿಸಿದರು. ಶಾಸಕರು ಟೆಂಡರ್ ಕರೆಯಲಾಗಿದೆ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. 15 ದಿನದೊಳಗೆ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸದಿದ್ದರೆ ರಸ್ತೆ ತಡೆ ನಡೆಸಲಾಗುವುದೆಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಜಿಲಾನಿ ಪಾಶಾ, ಶಿವರಾಜ ನಾಯಕ, ಆಂಜನೇಯ ಭಂಡಾರಿ, ಅಮರೇಶ ನಾಯಕ, ಜಿಲಾನಿ, ರವಿಕುಮಾರ, ಚಂದ್ರು ನಾಯಕ, ರಾಘವೇಂದ್ರ ಭಜಂತ್ರಿ, ತಿಮ್ಮಾರೆಡ್ಡಿ, ಮೆಹಬೂಬ, ರುದ್ರಯ್ಯಸ್ವಾಮಿ, ನಿತಿನ್ ಈ ವೇಳೆ ಹಾಜರಿದ್ದರು.