ಅಂಬಾದೇವಿಗೆ ಕಳಸಾರೋಹಣ ನಾಳೆ
ಸಿಂಧನೂರು: ನಗರದ ಆದರ್ಶ ಕಾಲೋನಿಯ ಅಂಬಾಭವಾನಿ ದೇವಸ್ಥಾನದ 2ನೇ ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಕಳಸಾರೋಹಣ, ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮವನ್ನು ಜೂ.22ರಂದು ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಶಶಿಕುಮಾರ ದಾನಿ ತಿಳಿಸಿದ್ದಾರೆ.
ಅಂಬಾಭವಾನಿ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.21ರಂದು ನಗರದ ಎಪಿಎಂಸಿಯ ಗಣೇಶ ದೇವಸ್ಥಾನದಿಂದ ಕಳಸವನ್ನು ಕುಂಭ, ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಗುವುದು. ನಂತರ ದಾಸವಾಣಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
22ರಂದು ಬೆಳಗ್ಗೆ 6 ಗಂಟೆಗೆ ರಂಗನಾಥ ಆಚಾರ್ ಸಾಲಗುಂದಾ ಇವರಿಂದ ಕಳಸ ಪ್ರತಿಷ್ಠಾಂಗ ಹೋಮ, 6.48ಕ್ಕೆ ಸಿಂಹಮೂರ್ತಿ ಪ್ರತಿಷ್ಠಾಪನೆ, 7.15ಕ್ಕೆ ಉಡುಪಿ ಪೇಜಾವರ ಮಠದ ಕಿರಿಯಪಟ್ಟ ವಿಶ್ವಪ್ರಸನ್ನ ಶ್ರೀಪಾದಂಗಳವರ ಅಮೃತ ಹಸ್ತದಿಂದ ಕಳಸಾರೋಹಣ ನಡೆಯಲಿದೆ. ನಂತರ 8.12ಕ್ಕೆ ಎಸ್‌ಎಸ್‌ಕೆ ಸಮಾಜದ 43 ಮಕ್ಕಳಿಗೆ ಉಪನಯನ, 7 ಜೋಡಿಗಳ ಸಾಮೂಹಿಕ ವಿವಾಹ ನಡೆಯಲಿದೆ.