ಈಶ್ಯಾನ್ಯ ಕ್ಷೇತ್ರ: ಜಿಲ್ಲೆಯಲ್ಲಿ ಶೇ.59.60ರಷ್ಟು ಮತದಾನ
ರಾಯಚೂರು: ಜಿಲ್ಲೆಯ ಐದು ತಾಲೂಕುಗಳಲ್ಲಿ ಶುಕ್ರವಾರ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನ ಶಾಂತಿಯುತವಾಗಿ ನಡೆದಿದ್ದು, ಒಟ್ಟಾರೆ ಶೇ.59.60ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಬೆಳಗ್ಗೆಯಿಂದಲೇ ನಗರ ಸೇರಿದಂತೆ ಜಿಲ್ಲಾದ್ಯಂತ ವಿವಿಧೆಡೆ ಸ್ಥಾಪಿಸಿದ್ದ ಮತಗಟ್ಟೆಗಳ ಎದುರು ಶಿಕ್ಷಕರು ಸಾಲಾಗಿ ನಿಂತು ಮತದಾನ ಮಾಡಿದರು. ಮತದಾನವು ಶಾಂತಿಯುತವಾಗಿದ್ದು, ರಾಯಚೂರು ತಾಲೂಕಿನಲ್ಲಿ ಶೇ.54.19, ಮಾನವಿ-ಶೇ.64.36, ಸಿಂಧನೂರು-ಶೇ.61.04, ಲಿಂಗಸ್ಗೂರು-ಶೇ.70.37 ಹಾಗೂ ದೇವದುರ್ಗದಲ್ಲಿ ಶೇ.58.53ರಷ್ಟು ಮತದಾನವಾಗಿದೆ ಎಂದು ಆಡಳಿತ ತಿಳಿಸಿದೆ. ನಗರದ ವಿವಿಧೆಡೆಯ ಮತಗಟ್ಟೆಗಳ ಬಳಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಹಾಜರಿದ್ದು, ಶಿಕ್ಷಕ ಮತದಾರರ ಒಲೈಕೆ ಕಾರ್ಯದಲ್ಲಿ ತೊಡಗಿದ್ದದ್ದು ಕಂಡುಬಂದಿತು. ಕಾಂಗ್ರೆಸ್ ಮುಖಂಡ ಹಾಗೂ ಎಂಎಲ್ಸಿ ಬೋಸರಾಜು, ಮಾಜಿ ಶಾಸಕ ಪಾಪಾರೆಡ್ಡಿ, ಅಮರೇಗೌಡ ಹಂಚಿನಾಳ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖರು ಮತಗಟ್ಟೆಗಳ ಬಳಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.
ಮುದಗಲ್ನಲ್ಲಿ ಶೇ.78ರಷ್ಟು ಮತದಾನ
ಮುದಗಲ್ ವರದಿ: ಈಶಾನ್ಯ ವಲಯ ಶಿಕ್ಷಕರ ಕ್ಷೇತ್ರ ಪದವೀಧರರ ಚುನಾವಣೆ ಶಾಂತಿಯುತವಾಗಿ ನಡೆದು ಪಟ್ಟಣದಲ್ಲಿ ಶೇ.78ರಷ್ಟು ಮತದಾನವಾಗಿದೆ. ಸ್ಥಳೀಯ ಪಪಂ ಕಾರ್ಯಾಲಯದಲ್ಲಿ ತೆರಯಲಾಗಿದ್ದ ಮತಗಟ್ಟೆಗೆ ಶಿಕ್ಷಕರು ಬೆಳಗ್ಗೆಯಿಂದ ಮತ ಚಲಾಯಿಸಿದರು. ಒಟ್ಟು 129 ಮತಗಳಲ್ಲಿ 14 ಮಹಿಳೆಯರು ಮತ್ತು 83 ಪುರುಷರು ಸೇರಿ ಒಟ್ಟು 97 ಶಿಕ್ಷಕರು ತಮ್ಮ ಮತದಾನ ಚಲಾಯಿಸಿದ್ದಾರೆಂದು ಚುನಾವಣಾಧಿಕಾರಿ ಎಂ.ಡಿ. ಆಸೀಫ್ ತಿಳಿಸಿದರು. ಆದರೆ ಸರ್ಕಾರ ಶಿಕ್ಷಕರಿಗೆ ಮತದಾನದಲ್ಲಿ ಭಾಗವಹಿಸಲು ಅನುಕೂಲವಾಗಲೆಂದು ಶುಕ್ರವಾರ ರಜೆ ನೀಡಿದ್ದರೂ ಅನೇಕ ಶಿಕ್ಷಕರು ಮತಗಟ್ಟೆಗೆ ಬಂದು ಮತದಾನದಲ್ಲಿ ಭಾಗವಹಿಸದಿರುವುದು ಕಂಡು ಬಂತು.