ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತಪ್ಪದ ಜನರ ಅಲೆದಾಟ

Rashmi Kasaragodu
Updated On : 21 Jun 2014, 11:41 am

 ಜಗನ್ನಾಥ ಆರ್. ದೇಸಾಯಿ
ಕ.ಪ್ರ. ವಾರ್ತೆ   ರಾಯಚೂರು   ಜೂ. 20
ಇಲ್ಲಿನ ನಗರಸಭೆ ಗೊಂದಲದ ಗೂಡು. ಇಕ್ಕಟ್ಟಾದ ಕಚೇರಿ, ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಉಸಿರುಗಟ್ಟುವ ವಾತಾವರಣ. ದಾಖಲೆಗಳನ್ನಿಡಲೂ ಸಮಸ್ಯೆ. ಇಂಥ ಸಮಸ್ಯೆ ನಿವಾರಣೆಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ನಿರ್ಮಿಸಲಾರಂಭಿಸಿದ ನಗರಸಭೆ ನೂತನ ಕಟ್ಟಡ ಅರ್ಧಕ್ಕೆ ನಿಂತಿದೆ.
ಸ್ಥಳೀಯ ನಗರಸಭೆಗೆ ಮೊದಲಿನಿಂದಲೂ ಸುಸಜ್ಜಿತ ಕಟ್ಟಡವಿಲ್ಲ. ಸಿಬ್ಬಂದಿ ಮತ್ತು ನಗರಸಭೆಗೆ ಆಗಮಿಸುವ ಎಲ್ಲರಿಗೆ ಸೌಲಭ್ಯಗಳದ್ದೇ ಕೊರತೆ. ನಗರಸಭೆಯ ಆಡಳಿತ ಮಂಡಳಿಯ ಸಭೆಗಳನ್ನು ಕರೆದಾಗಲೆಲ್ಲ ಬಾಗಿಲು ಮುಚ್ಚಿ ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸ್ ಭದ್ರತೆ ಅಡಿ ಸಭೆ ನಡೆಸುವಂಥ ಸ್ಥಿತಿಯಿತ್ತು.
ಅಂತೆಯೇ ಹಳೆಯ ಕಟ್ಟಡ ತೆರವುಗೊಳಿಸಿ ಅಲ್ಲಿಯೇ ಹೊಸ ಕಟ್ಟಡ ನಿರ್ಮಿಸಲು ಚಾಲನೆ ನೀಡಲಾಗಿದೆ. ಆದರೆ ಕಟ್ಟಡ ಮಾತ್ರ ಅರ್ಧಮರ್ಧ ಮುಗಿದಿದ್ದು ಮೂಲ ಉದ್ದೇಶಕ್ಕೆ ಹಿನ್ನಡೆಯಾಗಿದೆ. ಅಷ್ಟೇ ಅಲ್ಲ ಸಿಬ್ಬಂದಿ ಸೇರಿ ಎಲ್ಲರಿಗೂ ನಗರಸಭೆಯ ಎರಡು ಕಟ್ಟಡಗಳ ಮಧ್ಯೆ ಅಲೆದಾಡುವಂತಾಗಿದೆ.
ಈಗಾಗಲೇ 1.99 ಕೋಟಿ ಖರ್ಚು: ನಗರಸಭೆಯ ಹೊಸ ಕಟ್ಟಡಕ್ಕೆ ಆಡಳಿತವು ಇದುವರೆಗೆ 1.99 ಕೋಟಿ ವೆಚ್ಚ ಮಾಡಿದೆ. ನೂತನ ಕಟ್ಟಡದಲ್ಲಿ ಸಭಾಂಗಣ, ಕಚೇರಿಯ ವಿವಿಧ ವಿಭಾಗಗಳಿಗೆ ವಿಶಾಲವಾದ ಕೊಠಡಿಗಳು, ಸುಸಜ್ಜಿತ ಸೌಲಭ್ಯಗಳಿಂದ ಕಟ್ಟಡ ಕೂಡಿದೆ. ಆದರೆ 1.99 ಕೋಟಿ ವೆಚ್ಚ ಮಾಡಿದರೂ ಕಟ್ಟಡ ಮಾತ್ರ ಪೂರ್ಣಗೊಂಡಿಲ್ಲ. ಸದ್ಯ ಸಭಾಂಗಣ, ಕೊಠಡಿಗಳು ಹಾಗೂ ಸಂಪರ್ಕ ಮಾರ್ಗ ಮಾತ್ರ ನಿರ್ಮಿಸಿದ್ದು, ಇನ್ನುಳಿದಂತೆ ಯಾವುದೇ ರೀತಿಯ ಕಾಮಗಾರಿ ನಡೆದಿಲ್ಲ.
ಬಾಕಿ ಕೆಲಸ: ಕಿಟಕಿ, ಬಾಗಿಲುಗಳ ಜೋಡಣೆ, ದೀಪದ ಅಳವಡಿಕೆ, ಆಸನಗಳ ಸೌಲಭ್ಯ ಸೇರಿದಂತೆ ಇನ್ನೂ ಬಹುತೇಕ ಕಾಮಗಾರಿ ಬಾಕಿಯಿದೆ. ಕಳೆದ ಅವಧಿಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದವರು ಕಟ್ಟಡ ಪೂರ್ಣಗೊಳ್ಳುವ ಮೊದಲೇ ನಗರಸಭೆಯ ಚುನಾವಣೆ ನಡೆಯುವ ಲಕ್ಷಣಗಳು ಗೋಚರಿಸಿದ್ದರಿಂದ ತರಾತುರಿಯಲ್ಲಿ ಅರ್ಧ ನಿರ್ಮಿತ ಕಟ್ಟಡವನ್ನೇ ಉದ್ಘಾಟಿಸಿದರು.
ಅನಂತರ ಅಧಿಕಾರಕ್ಕೆ ಬಂದ ಆಡಳಿತ ಮಂಡಳಿ ಸದಸ್ಯರು ನಗರಸಭೆಯ ನೂತನ ಕಟ್ಟಡ ಪೂರ್ಣಗೊಳಿಸಲು ಇನ್ನೂ 1.50 ಕೋಟಿ ಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದಾರೆ. ಈ ಮೊತ್ತಕ್ಕಾಗಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದು, ಸರ್ಕಾರದಿಂದ ಇನ್ನೂ ಯಾವುದೇ ರೀತಿಯ ಸ್ಪಂದನೆಯಿಲ್ಲ ಎಂಬ ಆರೋಪ ಕೇಳಿಬಂದಿದೆ.
ಅಲೆದಾಟ: ಸದ್ಯ ನಗರಸಭೆಯು ಹಳೆಯ ಹಾಗೂ ಹೊಸ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಮತ್ತೊಂದು ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ದಿನವೂ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಎರಡೂ ಕಟ್ಟಡಗಳಿಗೆ ಅಲೆದಾಡುವಂತಾಗಿದೆ. ಸಿಬ್ಬಂದಿ ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ.
ಸಂಚಾರ ದಟ್ಟಣೆಯಿರುವ ರಸ್ತೆಯನ್ನು ನಿತ್ಯ ಹತ್ತಾರು ಬಾರಿ ದಾಟಿ ಆಚೆಯ ಕಟ್ಟಡಕ್ಕೆ ಕಡತ ಹಿಡಿದು ತಿರುಗುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಸದ್ಯದ ನಗರಸಭೆಯ ತಾತ್ಕಾಲಿಕ ಕಟ್ಟಡವು ಚಿಕ್ಕದಾಗಿದ್ದು, ನಗರಸಭೆಯ ವ್ಯವಸ್ಥಾಪಕರು ಮತ್ತು ಕೆಲ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದ ಸಿಬ್ಬಂದಿ ಹಳೆಯ ನಗರಸಭೆಯ ಕಟ್ಟಡದಲ್ಲಿದ್ದು, ಕಡತಗಳನ್ನು ಹಿಡಿದು ಅಲೆಯುವುದು ಬಿಡದ ಕರ್ಮವಾಗಿದೆ.
ನೂತನ ನಗರಸಭೆಯ ಕಟ್ಟಡದ ನಿರ್ಮಾಣ ಕಾರ್ಯ ಪುನಾರಂಭಗೊಂಡು ಯಾವಾಗ ಮುಗಿದೀತೋ ಎಂದು ನಾಗರಿಕರು ಹಾಗೂ ಸಿಬ್ಬಂದಿ ಕಾಯುವಂತಾಗಿದೆ. ಸರ್ಕಾರ, ಜಿಲ್ಲಾಡಳಿತ ಇತ್ತ ಗಮನಹರಿಸುವುದು ಒಳಿತು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement