ಲಿಂಗಸ್ಗೂರಿನಲ್ಲಿ ಶೇ.70ರಷ್ಟು ಮತ ಹಕ್ಕು ಚಲಾವಣೆ
ಲಿಂಗಸ್ಗೂರು: ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆ ಶಾಂತಿಯುತವಾಗಿ ಯಶಸ್ವಿಯಾಗಿದ್ದು, ಒಟ್ಟು 567 ಮತದಾರರ ಪೈಕಿ 399 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.70.37ರಷ್ಟು ಮತದಾನವಾಗಿದೆ.
ತಾಲೂಕಿನ ಲಿಂಗಸ್ಗೂರು, ಮಸ್ಕಿ, ಮುದಗಲ್ ಹಾಗೂ ಹಟ್ಟಿ ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯ 441 ಪುರುಷರಲ್ಲಿ 310 ಮತದಾರರು ಹಾಗೂ 126 ಮಹಿಳಾ ಮತದಾರರ ಪೈಕಿ 80 ಮತದಾರರು ಸೇರಿದಂತೆ ಒಟ್ಟು 567 ಮತದಾರರ ಪೈಕಿ 399 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಲಿಂಗಸ್ಗೂರು ತಹಸೀಲ್ದಾರ್ ಕಚೇರಿ ಮತಗಟ್ಟೆ ಕೇಂದ್ರದಲ್ಲಿ 161 ಮತದಾರರ ಪೈಕಿ 125 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮಸ್ಕಿ ಗ್ರಾಪಂ ಕಚೇರಿ ಮತಗಟ್ಟೆ ಕೇಂದ್ರದಲ್ಲಿ 118 ಮತದಾರರ ಪೈಕಿ 86 ಮತದಾರರು. ಹಟ್ಟಿ ಕ್ಯಾಂಪ್ ಸರ್ಕಾರಿ ಪದವಿ ಪೂರ್ವ ಕಾಲೇಜು ಮತಗಟ್ಟೆ ಕೇಂದ್ರದಲ್ಲಿ 159 ಮತದಾರರ ಪೈಕಿ 91 ಮತದಾರರು. ಮುದಗಲ್ ಪಪಂ ಮತಗಟ್ಟೆ ಕೇಂದ್ರದಲ್ಲಿ 129 ಮತದಾರರ ಪೈಕಿ 97 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆ ನಿಮಿತ್ತ ತಾಲೂಕಿನ ಲಿಂಗಸ್ಗೂರು, ಮಸ್ಕಿ, ಮುದಗಲ್ ಹಾಗೂ ಹಟ್ಟಿಯಲ್ಲಿ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಸೇರಿದಂತೆ ಒಟ್ಟು 20 ಜನ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ಜರುಗದಂತೆ ಮತಗಟ್ಟೆ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.