ಜು.5ರಿಂದ ಅನಿರ್ದಿಷ್ಟಾವಧಿ ವ್ಯಾಪಾರ ವಹಿವಾಟು ಬಂದ್
ರಾಯಚೂರು: ಕರ್ನಾಟಕ ಕೃಷಿ ಉತ್ಪನ್ನ ಮಾರಾಟ ಕಾಯಿದೆ 1966ರ ಕಲಂ 72ಕ್ಕೆ ತಿದ್ದುಪಡಿ ವಿರೋಧಿಸಿ ಜು.5ರಿಂದ ಅನಿರ್ದಿಷ್ಟಾವಧಿ ವ್ಯಾಪಾರ ವಹಿವಾಟು ಬಂದ್ ನಡೆಸಲು ದಿ ಗಂಜ್ ಮರ್ಚಂಟ್ಸ್ ಅಸೋಸಿಯೇಷನ್ ಎಚ್ಚರಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘವು ಸರ್ಕಾರ ಕೈಗೊಂಡ ತಿದ್ದುಪಡಿಯಿಂದ ಮಾರುಕಟ್ಟೆಗಳಲ್ಲಿ ವ್ಯವಹರಿಸುವ ಸಣ್ಣ ಖರೀದಿದಾರರು ಬೀದಿ ಪಾಲಾಗುತ್ತಾರೆ. ನಿತ್ಯ ಕೃಷಿ ಉತ್ಪನ್ನಗಳನ್ನು ಖರೀದಿಸುವ ಪ್ರಕ್ರಿಯೆಗೆ ಲಕ್ಷಾನುಗಟ್ಟಲೇ ಹಣವನ್ನು ಹೊಂದಿಸುವುದು ಅಸಾಧ್ಯದ ಮಾತಾಗಿದೆ. ಆನ್‌ಲೈನ್ ಟ್ರೇಡಿಂಗ್ ಜಾರಿಗೆ ತಂದಲ್ಲಿ ವಿದೇಶಿ ಬಂಡವಾಳದಾರರ ವಶಕ್ಕೆ ದೊಡ್ಡ ವ್ಯಾಪಾರಸ್ಥರು ಒಳಪಡುವ ಆತಂಕವಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಹತ್ತಾರು ನ್ಯೂನತೆಗಳಿಂದ ಕೂಡಿರುವ ತಿದ್ದುಪಡಿಯನ್ನು ಸರ್ಕಾರ ಜಾರಿಗೆ ತರದಂತೆ ಒತ್ತಾಯಿಸಿ ಜು.5ರಿಂದ ಅನಿರ್ದಿಷ್ಟಾವಧಿ ವ್ಯಾಪಾರ ವಹಿವಾಟು ಬಂದ್ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಬೆಟ್ಟಪ್ಪ ಎಚ್ಚರಿಸಿದ್ದಾರೆ.
ರೇಲ್ವೆ ಒಳಸೇತುವೆ: ಸಂಚಾರ ಅವಕಾಶಕ್ಕೆ ಆಗ್ರಹ
ರಾಯಚೂರು: ನಗರದ ರೇಲ್ವೆ ಸ್ಟೇಷನ್ ಬಲಭಾಗದ ಬಿ ಕ್ಯಾಬಿನ್ ಹತ್ತಿರದ ಹಳೆಯ ಒಳಸೇತುವೆಯ ರಸ್ತೆಯನ್ನು ಸಂಚಾರಕ್ಕೆ ಅನುವು ಮಾಡಿಕೊಡುವಂತೆ ವಿವಿಧ ಸಂಘಟನೆಗಳ ಪ್ರಮುಖರು ರೇಲ್ವೆ ಸಚಿವರನ್ನು ಒತ್ತಾಯಿಸಿದ್ದಾರೆ. ಈ ಕುರಿತು ಸಚಿವರಿಗೆ ಪತ್ರ ಬರೆದಿರುವ ಮುಖಂಡರು, ಒಳಸೇತುವೆಯ ಆಚೆಗಿರುವ ವಿವಿಧ ಬಡಾವಣೆಗಳ ಜನತೆ ನಗರದ ಜಗಜೀವನರಾಂ ವೃತ್ತದ ರಸ್ತೆ ಹಾಗೂ ಮಂತ್ರಾಲಯಂ ರಸ್ತೆ ಸೇರಿ ವಿವಿಧ ಪ್ರಮುಖ ರಸ್ತೆಗಳಿಗೆ ಸಂಪರ್ಕ ಮಾರ್ಗವಾಗಿದೆ. ಈ ಒಳಸೇತುವೆಯ ಮಾರ್ಗ ಸದ್ಯ ಮುಚ್ಚಲಾಗಿದ್ದು, ಕೂಡಲೇ ರೇಲ್ವೆ ಇಲಾಖೆ ಹಾಗೂ ಜಿಲ್ಲಾಡಳಿತಗಳು ಹಳೆಯ ಒಳ ಸೇತುವೆಯಲ್ಲಿ ರಸ್ತೆ ಕಾಮಗಾರಿ ಕೈಗೊಂಡು ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ವಿವಿಧ ಸಂಘಟನೆಗಳ ಪ್ರಮುಖರಾದ ಎನ್. ತಾಯಣ್ಣ, ಎಂ. ವಿರೂಪಾಕ್ಷಿ, ಶಿವರಾಜ್ ಗಂಟೆ ಹೊಸೂರು, ವೆಂಕಟೇಶ್ ಭಂಡಾರಿ, ಶಂಕ್ರಪ್ಪ, ಭೀಮಪ್ಪ ಸೇರಿ ಅನೇಕರು ಒತ್ತಾಯಿಸಿದ್ದಾರೆ.