ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸಲು ಬದ್ಧ: ಸಾಲ್ಮನಿ
ಲಿಂಗಸ್ಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ಎಲ್ಲ ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸಲು ಬದ್ಧ ಎಂದು ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ ಹೇಳಿದರು. ಪಟ್ಟಣದ ವಿವಿಧ ವಾರ್ಡುಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ಮಾತನಾಡಿ, 13ನೇ ಹಣಕಾಸು ಯೋಜನೆಯಡಿ 50 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾರ್ಯಗಳು ಪ್ರಗತಿಯಲ್ಲಿದ್ದು, ಅಮರೇಶ್ವರ ಬಾಲಕಿಯರ ಶಾಲೆ ಹತ್ತಿರ ಮುಖ್ಯರಸ್ತೆಯಿಂದ ಐಎಂಎ ಸಭಾಂಗಣದವರೆಗೆ ರಸ್ತೆ ಡಾಂಬರೀಕರಣ ಪೂರ್ಣಗೊಂಡಿದೆ. ಬೆಂಗಳೂರು ಬೈಪಾಸ್ ರಸ್ತೆಯಿಂದ ಸಹಾಯಕ ಆಯುಕ್ತರ ಕಚೇರಿ ಹಾಗೂ ಗಡಿಯಾರ ಚೌಕ್ನಿಂದ ಮುಕ್ತಿಧಾಮದವರೆಗೆ ರಸ್ತೆ ಡಾಂಬರೀಕರಣ ಪ್ರಗತಿಯಲ್ಲಿದೆ ಎಂದರು. ನಗರದಲ್ಲಿ 25 ಲಕ್ಷ ವೆಚ್ಚದಲ್ಲಿ ವಿವಿಧ 5 ಕಡೆಗಳಲ್ಲಿ ಸ್ವಾಗತ ಕಮಾನು ಅಳವಡಿಸಲು ಟೆಂಡರ್ ಕರೆದು ಕಾಮಗಾರಿ ನೀಡಲಾಗಿದೆ. ಬಸವಸಾಗರ ವೃತ್ತದಿಂದ ಹಳೆ ಬಸ್ ನಿಲ್ದಾಣದವರೆಗೆ ರಸ್ತೆ ಮಧ್ಯದಲ್ಲಿ 27 ಲಕ್ಷ ವೆಚ್ಚದಲ್ಲಿ ದೀಪಾಲಂಕಾರ ಮಾಡಲಾಗುವುದು. 72 ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ 10 ಲಕ್ಷ ವೆಚ್ಚದಲ್ಲಿ ಕೆರೆಯಲ್ಲಿ ಬೋಟಿಂಗ್ ಸೇರಿ ಇತರೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ.