ನಾನು ಸಚಿವ ಸ್ಥಾನಾಕಾಂಕ್ಷಿಅಲ್ಲ: ಎಂಎಲ್ಸಿ ಬೋಸರಾಜು
ರಾಯಚೂರು: ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ನೀಡುವ ಅಧಿಕಾರ ಬಿಟ್ಟದ್ದು ಎಂದಿರುವ ಎಂಎಲ್ಸಿ ಬೋಸರಾಜು, ತಾವು ಸಚಿವ ಸ್ಥಾನಕ್ಕಾಗಿ ಯಾರಿಗೂ ದುಂಬಾಲು ಬೀಳುವುದಿಲ್ಲ ಎಂದು ಹೇಳಿದರು. ಮಾನವಿ ತಾಲೂಕಿನಲ್ಲಿ ಎಡದಂಡೆ ಕಾಲುವೆಯ ಸ್ಥಳದಲ್ಲಿ ಕಾಲುವೆ ಆಧುನೀಕರಣ ಕಾಮಗಾರಿ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮನ್ನು ಎಂಎಲ್ಸಿ ಸ್ಥಾನಕ್ಕೆ ಸ್ಪರ್ಧೆಗಿಳಿಸುವ ಬಗ್ಗೆ ಮಾಹಿತಿಯಿರಲಿಲ್ಲ. ಹೈಕಮಾಂಡ್ ಕೊನೆಯ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಲು ಸೂಚಿಸಿತು ಎಂದರು. ತಾವು ಎಂದಿಗೂ ಸಚಿವ ಸ್ಥಾನ ಬಯಸಿ ಪ್ರಭಾವ ಬೀರುವ ಕಾರ್ಯ ಮಾಡುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರ ಅಂತಿಮ. ಸರ್ಕಾರದಲ್ಲಿ ತಮಗಿಂತ ಹಿರಿಯ ನಾಯಕರಿದ್ದು ಅವರಿಗೆ ಪಕ್ಷ ಸಚಿವ ಸ್ಥಾನ ನೀಡಲೆಂದು ಆಶಿಸಿದರು. ರಾಜ್ಯದಲ್ಲಿ ಬರ ಪರಿಸ್ಥಿತಿಯ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಎಲ್ಲ ಶಾಸಕರೊಂದಿಗೆ ಚರ್ಚಿಸಿದ್ದಾರೆ. ಮುಂದಿನ ವಾರದ ನಂತರವೂ ಮಳೆಯಾಗದಿದ್ದರೆ ಆಯಾ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರದಿಂದ ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಬಗ್ಗೆ ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.