ಅಕ್ರಮ ಪೈಪ್ ತೆರವಿಗೆ ರಸ್ತೆ ತಡೆ
ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯ 55ನೇ ವಿತರಣಾ ಕಾಲುವೆಯ ವ್ಯಾಪ್ತಿಗೊಳಪಡುವ ಮೇಲ್ಭಾಗದ ರೈತರ ಅಕ್ರಮ ಪೈಪ್ಗಳನ್ನು ತೆಗೆದು ಹಾಕುವಂತೆ ಒತ್ತಾಯಿಸಿ ಕೆಳಭಾಗದ ರೈತರು ರೈತ ಸಂಘ, ಕೆಆರ್ಎಸ್, ಹಸಿರು ಸೇನೆ, ಆರ್ವೈಎಫ್ಐ ನೇತೃತ್ವದಲ್ಲಿ ಭಾನುವಾರ ರಾಗಲಪರ್ವಿ ಕ್ರಾಸ್ ಬಳಿ ರಸ್ತೆ ತಡೆ ಚಳವಳಿ ನಡೆಸಿದರು.
ಕಳೆದ 6 ತಿಂಗಳಿಂದ ವಿತರಣಾ ಕಾಲುವೆ 55ರ ವ್ಯಾಪ್ತಿಯಲ್ಲಿ ಬರುವ ಗೌಡನಬಾವಿಯಿಂದ ಮೇಲ್ಭಾಗದಲ್ಲಿ ಅಕ್ರಮ ಪೈಪ್ಗಳ ತೆರವಿಗೆ ಆಗ್ರಹಿಸಿ ನಾಲ್ಕು ಸುತ್ತಿನ ಹೋರಾಟ ನಡೆಸಲಾಗಿದೆ. 13 ದಿನದ ಧರಣಿ ಹೋರಾಟ ನೀರಾವರಿ ಇಲಾಖೆ ಮುಂದೆ ನಡೆಸಿದಾಗ ಜಿಲ್ಲಾಧಿಕಾರಿಯನ್ನು ಘೇರಾವ್ ಹಾಕಿ ಧರಣಿ ಸ್ಥಳಕ್ಕೆ ಕರೆ ತಂದಾಗ ನೀಡಿದ ಲಿಖಿತ ರೂಪದ ಭರವಸೆಯೂ ಫಲಿಸಲಿಲ್ಲ ಎಂದರು.
ಉಡಾಫೆ ಮಾತು: ಈ ವಿಷಯದಲ್ಲಿ ಇಬ್ಬರು ಶಾಸಕರು ಅಕ್ರಮ ಪೈಪ್ಗಳ ತೆರವಿಗೆ ತಡೆಯೊಡ್ಡಿದ್ದು ಅಧಿಕಾರಿಗಳ ಕೈ ಕಟ್ಟಿ ಹಾಕಿಕೊಂಡಂತಿದೆ. ಅಕ್ರಮದಾರರ ಪರ ವಕಾಲತು ವಹಿಸುತ್ತಿರುವ ರಾಜಕಾರಣಿ-ಅಧಿಕಾರಿಗಳನ್ನು ನೋಡಿದರೆ, ಪ್ರಜಾಪ್ರಭುತ್ವ ತಲೆಕೆಳಗಾಗಿ ಪ್ರಭುಗಳದ್ದೇ ಕಾರುಬಾರು ಎಂಬುದು ಅರ್ಥವಾಗುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಗಿ ಆರೋಪಿಸಿದರು.
ತಹಸೀಲ್ದಾರ್ ಜಗನ್ನಾಥ ರೆಡ್ಡಿ ತಮ್ಮ ಜವಬ್ದಾರಿಯನ್ನೇ ಮರೆತು ಮೌನ ವಹಿಸಿದ್ದಾರೆ. ದಂಡಾಧಿಕಾರಿಗಳು ತಪ್ಪು ಮಾಡಿದವರ ವಿರುದ್ಧ ದಂಡನೆಗೆ ಮುಂದಾಗದೆ, ತಮಗೇನು ಸಂಬಂಧವಿಲ್ಲವೆಂದು ಉಡಾಫೆ ಮಾತುಗಳಾಡುತ್ತಿದ್ದಾರೆ. ಸೂಪರ್ಡೆಂಟ್ ಎಂಜಿನಿಯರ್ ಯರಮರಸ್ ಅವರು ಧರಣಿ ಸ್ಥಳಕ್ಕೆ ಬಂದು ನೀಡಿದ ಲಿಖಿತ ರೂಪದ ಭರವಸೆ ಭರವಸೆಯಾಗಿಯೇ ಉಳಿಯಿತು. ಕೆಲಸವಂತೂ ಆಗಲಿಲ್ಲ ಎಂದು ಕಿಡಿ ಕಾರಿದರು.
ಮಹಾನಗರಗಳಿಗೆ ಗುಳೆ: ಸಿಂಧನೂರು ನೀರಾವರಿ ಅಧಿಕಾರಿ ಹನುಮಂತಪ್ಪ, ಮಸ್ಕಿ ನೀರಾವರಿ ಅಧಿಕಾರಿಯಾದ ಗೋವರ್ಧನ್ ಅವರು ಅಕ್ರಮಗಳ ಅತಿಥಿಗಳಾಗಿ ಕಳ್ಳ-ಪೊಲೀಸ್ ಆಟವಾಡುತ್ತಿದ್ದಾರೆ. ರಜೆ ಮೇಲೆ ಹೋದ ಕುಮಾರಸ್ವಾಮಿಯ ಕರ್ಮಕಾಂಡ ಕತ್ತಲಿನಲ್ಲಿಯೇ ಉಳಿದಿದೆ. ಬೇಕಾಬಿಟ್ಟಿಯಾಗಿ 4 ತಂಡಗಳನ್ನು ಮಾಡಿ ಎಸಿ ಸಾಹೇಬರ ನೇತೃತ್ವದಲ್ಲಿ 42 ಅಕ್ರಮ ಪೈಪ್ಗಳನ್ನು ಎಡಭಾಗದಲ್ಲಿ ಅವೈಜ್ಞಾನಿಕವಾಗಿ ಕಟ್ ಮಾಡಿ ಏನೋ ತಾವು ದೊಡ್ಡ ಸಾಧನೆ ಮಾಡಿದ್ದೇವೆಂದು ಸುಳ್ಳು ವರದಿಯನ್ನು ನೀಡುತ್ತಿದ್ದಾರೆ. ಕೆಲ ಅಧಿಕಾರಿಗಳು 55ನೇ ಕಾಲುವೆ ಕೆಳಭಾಗದ ರೈತರ ಗೋಳಿಗೆ ಗೋರಿ ತೋಡುತ್ತಿದ್ದಾರೆ. ನೀರಾವರಿ ಇದ್ದು ನೀರಿಲ್ಲದೆ ಸಾಲ ಮಾಡಿ ಹೆಂಡರು ಮಕ್ಕಳು ಬೆಂಗಳೂರು-ಮುಂಬೈ, ಗೋವಾದಂಥ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ ಎಂದು ಆರ್ವೈಎಫ್ಐ ರಾಜ್ಯಾಧ್ಯಕ್ಷ ಎಂ. ಗಂಗಾಧರ ಟೀಕಿಸಿದರು.
ಪೈಪ್ಗಳನ್ನು ಎಡ ಮತ್ತು ಬಲ ಎರಡು ಕಡೆ ತೆರವುಗೊಳಿಸಿ ವಲಕಂದಿನ್ನಿಯವರೆಗೆ ನೀರು ಹರಿಸಬೇಕು. ವಿದ್ಯುತ್ ಪರಿವರ್ತಕಗಳನ್ನು ಇತರೆ ಸಲಕರಣೆಗಳನ್ನು ತಕ್ಷಣ ವಶಪಡಿಸಿಕೊಳ್ಳಬೇಕು. ನಾಲಾ, ಬಾವಿ, ಹೊಂಡಗಳ ಹೆಸರಿನಲ್ಲಿ ಅಕ್ರಮ ನಾಲಾ ಪರವಾನಗಿಯನ್ನು ನೀಡಿದ್ದು, ಈ ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದರೆ ಜೂ.25ರಂದು ಸಿಂಧನೂರು ಬಂದ್ ಹೋರಾಟ ನಡೆಸಲಾಗುವು ಎಂದು ರೈತ ಸಂಘದ ಗೊಡ್ಯಾಳ ಎಚ್ಚರಿಸಿದರು.
ರೈತರ ಒತ್ತಾಯಗಳು
55ನೇ ಕಾಲುವೆಯ ಗೌಡನಬಾವಿಯಿಂದ ಮೇಲ್ಭಾದಲ್ಲಿರುವ ಅಕ್ರಮ ಪೈಪ್ಗಳನ್ನು ಹಾಗೂ ಅವೈಜ್ಞಾನಿಕವಾಗಿ ತೆರವುಗೊಳಿಸಿದ 42 ಪೈಪ್ಗಳ ಪೈಕಿ ಕಾಲುವೆ ಬಲ ಮತ್ತು ಎಡಭಾಗದಲ್ಲಿ ಸಹ ತೆರವುಗೊಳಿಸಬೇಕು, 0.0ದಲ್ಲಿ ಇರುವ ನೀರಿನ ಗೇಜ್ ಅನ್ವಯ ಗೌಡನಬಾವಿ ಕೆಳಭಾಗದಲ್ಲಿ ನೀರಿನ ಗೇಜ್ ಕಾಯ್ದುಕೊಳ್ಳಬೇಕು, ಕಾಲುವೆಗೆ ನೀರು ಬಂದ ತಕ್ಷಣ ವಾರಬಂಧಿ ಪ್ರಕಾರ ಕೂಡಲೆ ನೀರು ಕೆಳಭಾಗಕ್ಕೆ ಹರಿಸಬೇಕು, ಅನಧಿಕೃತ ನೀರುಗಳ್ಳರ ವಿದ್ಯುತ್ ಸಂಪರ್ಕ ತಕ್ಷಣ ಕಡಿತಗೊಳಿಸಿ ವಿದ್ಯುತ್ ಪರಿವರ್ತಕ ಸೇರಿದಂತೆ ಇತರೆ ಸಲಕರಣೆಗಳನ್ನು ಜಪ್ತಿ ಮಾಡಿಕೊಳ್ಳಬೇಕು, ಅನಧಿಕೃತ ನೀರುಗಳ್ಳರಿಗೆ ಅವಕಾಶ ನೀಡಿದ ಎಇಇ ಕುಮಾರಸ್ವಾಮಿ ಮತ್ತು ಅಕ್ರಮ ಪೈಪ್ಗಳನ್ನು ತೆಗೆಯಲು ಮೀನಮೇಷ ಎಣಿಸುತ್ತಿರುವ ಇಇ ಹನುಮಂತಪ್ಪ ಹಾಗೂ ಮಸ್ಕಿ ನೀರಾವರಿ ಅಧಿಕಾರಿ ಗೋವರ್ಧನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅಕ್ರಮ ಆಸ್ತಿ ಜಪ್ತಿ ಮಾಡಬೇಕು ಎಂಬ ಒತ್ತಾಯದ ಮನವಿ ಪತ್ರವನ್ನು ಕೆಆರ್ಎಸ್ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರ್ಗಿ ಸಹಾಯಕ ಆಯುಕ್ತರಿಗೆ ಸಲ್ಲಿಸಿದರು.
ತೀವ್ರ ವಾಗ್ಯುದ್ಧ
ಬೆಳಗ್ಗೆ 11 ಗಂಟೆಗೆ ರಾಗಲಪರ್ವಿ ಕ್ರಾಸ್ ಬಳಿ ನೂರಾರು ರೈತರು ರಸ್ತೆಯ ಮಧ್ಯೆ ಕುಳಿತು ಧರಣಿ ಆರಂಭಿಸಿದರು. ಮಧ್ಯಾಹ್ನ 3 ಗಂಟೆಯವರೆಗೆ ರೈತರು ಅಲ್ಲಿಂದ ಕದಲಲಿಲ್ಲ. ಇದರಿಂದಾಗಿ ಸುಮಾರು ಐದು ತಾಸುಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರಿಗೆ ತೀವ್ರ ತೊಂದರೆಯಾಯಿತು. ಡಿವೈಎಸ್ಪಿ ಸೂರ್ಯವಂಶಿ ನೇತೃತ್ವದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ ಕಲ್ಪಿಸಲಾಗಿತ್ತು. ಧರಣಿ ನಿರತರ ಬಳಿ ಸಹಾಯಕ ಆಯುಕ್ತ ಟಿ. ಯೋಗೀಶ ಆಗಮಿಸುತ್ತಿದ್ದಂತೆ ರೈತರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸ್ವಲ್ಪಕಾಲ ಅಧಿಕಾರಿಗಳ ಹಾಗೂ ರೈತರ ಮಧ್ಯೆ ತೀವ್ರ ವಾಗ್ವಾದ ನಡೆಯಿತು.
ಚಳವಳಿಯಲ್ಲಿ
ಕೆಆರ್ಎಸ್ ಜಿಲ್ಲಾಧ್ಯಕ್ಷ ಕೆ. ನಾಗಲಿಂಗಸ್ವಾಮಿ, ಆರ್ವೈಎಫ್ಐ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ, ಕೆಆರ್ಎಸ್ ಮಾನವಿ ತಾಲೂಕಾಧ್ಯಕ್ಷ ವಿ. ಮುದುಕಪ್ಪ ನಾಯಕ, ತಾಪಂ ಮಾಜಿ ಅಧ್ಯಕ್ಷ ರಮೇಶಪ್ಪ ಸಾಹುಕಾರ ದಿದ್ಗಿ, ಮುಖಂಡರಾದ ಜಿ. ರಂಗನಾಥ ಬುದ್ದಿನ್ನಿ, ಭೀಮಯ್ಯ ಜಾಲವಾಡಗಿ, ಮಹಾಂತೇಶ ಜಾಲವಾಡಗಿ, ಚೆನ್ನಾರೆಡ್ಡಿ ಸಾಗರ ಕ್ಯಾಂಪ್, ಎಂ. ಶ್ರಿನಿವಾಸರಾವ್ ಸಾಗರ ಕ್ಯಾಂಪ್, ನಾಗನಗೌಡ ದಿದ್ಗಿ, ಸೋಮನಾಥಗೌಡ ಬೆಳ್ಳಿಗನೂರು, ಅಡಿವೆಪ್ಪಗೌಡ ಜಾಲವಾಡಗಿ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು.