ಗುಣಮಟ್ಟಕ್ಕಿಲ್ಲ ಗಮನ
ಜಗನ್ನಾಥ ಆರ್. ದೇಸಾಯಿ
ರಾಯಚೂರು: ಲೋಕಸಭೆ ಚುನಾವಣೆಯ ನೀತಿ ಸಂಹಿತೆಯ ಅಡಚಣೆ, ಕಾಮಗಾರಿ ಕೈಗೊಳ್ಳಬೇಕಾದ ಸ್ಥಳಗಳ ಗುರುತಿಸುವಿಕೆಯಲ್ಲಿನ ವಿಳಂಬದಿಂದ ತಡವಾಗಿದ್ದ ತುಂಗಭದ್ರಾ ಎಡದಂಡೆ ಕಾಲುವೆಯ ಉಪಕಾಲುವೆಗಳು ಮತ್ತು ವಿತರಣೆ ಕಾಲುವೆಗಳ ದುರಸ್ತಿ ಆರಂಭಗೊಂಡಿದೆ. ದುರಸ್ತಿಯ ಆರಂಭದಲ್ಲಿಯೇ ಗುಣಮಟ್ಟದ ಬಗ್ಗೆ ಅಪಸ್ವರ ಎದ್ದಿದೆ. ಕಳಪೆ ಕಾಮಗಾರಿಯ ಶಂಕೆ ವ್ಯಕ್ತವಾಗುತ್ತಿದ್ದು, ನೀರಾವರಿ ಅಧಿಕಾರಿಗಳ ಮೌನ ಇದಕ್ಕೆ ಸಮ್ಮತಿ ನೀಡಿದೆ.
ಪ್ರತಿ ವರ್ಷ ಬೇಸಿಗೆಯ ಹಂಗಾಮಿನ ನಂತರ ಕಾಲುವೆಯಲ್ಲಿ ನೀರಿನ ನಿಲುಗಡೆಯಾಗುತ್ತಿದ್ದಂತೆಯೇ ಎಡದಂಡೆ ಆಧುನೀಕರಣ ಕಾಮಗಾರಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿತ್ತು. ಆದರೆ ಲೋಕಸಭೆ ಚುನಾವಣೆಯ ಗದ್ದಲದಲ್ಲಿ ನೀತಿ ಸಂಹಿತೆಯಿಂದ ಈ ಬಾರಿ ಕಾಮಗಾರಿ ಆರಂಭಿಸುವ ಪ್ರಕ್ರಿಯೆಯೇ ಗೊಂದಲಕ್ಕೆ ಬಿದ್ದಿತ್ತು. ಪರಿಣಾಮ ಕಾಮಗಾರಿ ವಿಳಂಬವಾಗಿ ಆರಂಭಗೊಂಡಿದೆ. ಆದರೆ ಕಾಮಗಾರಿಯ ಗುಣಮಟ್ಟದ ಬಗ್ಗೆಯೇ ಪ್ರಶ್ನೆಗಳು ಎದ್ದಿವೆ.
ಕಳೆದ ಅನೇಕ ವರ್ಷಗಳಿಂದ ಮಾನವಿ ಹಾಗೂ ರಾಯಚೂರು ತಾಲೂಕಿನ ರೈತರು ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರಿಲ್ಲದೇ ಬೆಳೆ ಹಾನಿ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲ, ಅನೇಕ ಬಾರಿ ಹೋರಾಟಕ್ಕಿಳಿದು ನೀರು ಪಡೆದದ್ದೂ ಇದೆ. ಕಾಲುವೆಯ ಮೇಲ್ಭಾಗದಲ್ಲಿ ಅಕ್ರಮ ನೀರಾವರಿ, ಕಾಲುವೆಗೆ ಅಕ್ರಮ ಪೈಪ್ ಅಳವಡಿಸಿ ನೀರೆತ್ತಿ ಬಳಕೆ ಮಾಡಿ ಬೆಳೆ ಬೆಳೆಯುವುದು ರೂಢಿಯಾಗಿದೆ. ಪರಿಣಾಮ ಕಡೆಯ ರೈತರಿಗೆ ನೀರಿಲ್ಲದ ಸ್ಥಿತಿ. ಅಂತೆಯೇ ಎಡದಂಡೆ ಕಾಲುವೆಯ ಆಧುನೀಕರಣ ಕೈಗೊಳ್ಳಲಾಗಿದೆ.
ಅನುಮಾನ: ರಾಜ್ಯ ಸರ್ಕಾರ ಈ ಬಾರಿ ಉಪಕಾಲುವೆಗಳು ಹಾಗೂ ವಿತರಣೆ ಕಾಲುವೆಗಳ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದೆ. ಮಾನವಿ ಹಾಗೂ ರಾಯಚೂರು ತಾಲೂಕಿನ ರೈತರಿಗೆ ಸಮರ್ಪಕ ನೀರು ಹರಿಸುವ ಉದ್ದೇಶವೇನೋ ಸರಿ. ಆದರೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನಗಳೆದ್ದಿವೆ.
ಕಳೆದ ಬಾರಿ ಯರಮರಸ್ ನೀರಾವರಿ ವಿಭಾಗದ ವ್ಯಾಪ್ತಿಯಲ್ಲಿ ಉಪಕಾಲುವೆಗಳ ದುರಸ್ತಿ ಕೈಗೊಳ್ಳಲಾಗಿತ್ತು. ಅಂತೆಯೇ ಈ ಬಾರಿ ಸಿರವಾರ ವಿಭಾಗದಲ್ಲಿ 152 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮಾನವಿ ತಾಲೂಕಿನ ಹಲವೆಡೆ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಕಾಮಗಾರಿಗೆ ಕಪ್ಪು ಮಣ್ಣಿನ ಪ್ರದೇಶದಲ್ಲಿ ಕಾಲುವೆ ಅಗೆದು ಅದೇ ಮಣ್ಣನ್ನು ಕಾಲುವೆಯ ಒಳಗೋಡೆ ಗಟ್ಟಿಗೊಳಿಸಲು ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಅನೇಕ ಕಡೆ ಕಾಲುವೆ ನಿರ್ಮಾಣದಲ್ಲಿ ನೀರು ಬಳಸದೇ ಕಾಟಾಚಾರಕ್ಕೆ ಕಾಮಗಾರಿ ಮಾಡಿ ಮುಗಿಸುವ ಹುನ್ನಾರ ನಡೆದಿದೆ.
ಎಂಎಲ್ಸಿ ಬೋಸರಾಜು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಕಾಲುವೆ ಸ್ಥಳದಲ್ಲಿ ಕಾಂಕ್ರೀಟ್ ಮಾದರಿ ತಪಾಸಣೆ ಮಾಡುವ ಲ್ಯಾಬ್ ಸ್ಥಾಪಿಸದೇ ಕಾಮಗಾರಿಗೆ ಗುತ್ತಿಗೆದಾರರು ಮುಂದಾಗಿರುವುದು ಪತ್ತೆಯಾಗಿದೆ. ಹಾಗೆಯೇ ಸರಿಯಾದ ರೀತಿಯಲ್ಲಿ ನೀರು ಸಿಂಪರಣೆ ಮಾಡದೇ ತರಾತುರಿಯಲ್ಲಿ ಮಣ್ಣಿನಿಂದ ಒಳಗೋಡೆ ಗಟ್ಟಿಗೊಳಿಸಿ ಅದರ ಮೇಲೆಯೇ ಕಾಂಕ್ರೀಟ್ ಅಳವಡಿಕೆ ನಡೆದಿದ್ದು ಕಂಡುಬಂದಿದೆ. ಗುತ್ತಿಗೆದಾರರು ಕಾಟಾಚಾರಕ್ಕೆ ಕಾಮಗಾರಿ ಮುಗಿಸಬೇಕೆಂಬ ತರಾತುರಿಯಲ್ಲಿರುವುದು ಸ್ಪಷ್ಟವಾಗಿತ್ತು.