ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಾದಿಮಹಲ್ ನಿರ್ಮಾಣಕ್ಕೆ ಶಾಸಕರಿಂದ ಸ್ಥಳ ಪರಿಶೀಲನೆ

Rashmi Kasaragodu
Updated On : 23 Jun 2014, 11:21 am

ದೇವದುರ್ಗ: ತಾಲೂಕಿನ ರಾಮನಾಳ ಗ್ರಾಮದಲ್ಲಿ ಸಮುದಾಯ ಭವನಕ್ಕೆ ಸರ್ಕಾರದಿಂದ ಹಣ ಮಂಜೂರಾಗಿದ್ದು, ಕಾಮಗಾರಿ ಆರಂಭಿಸುವಲ್ಲಿ ಆಗಿರುವ ವಿಳಂಬಕ್ಕೆ ಶಾಸಕ ವೆಂಕಟೇಶ ನಾಯಕ ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚೆಗೆ ತಾಲೂಕಿನ ರಾಮನಾಳ ಮತ್ತು ಕೊಪ್ಪರ ಗ್ರಾಮಕ್ಕೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ರಾಮನಾಳ ಗ್ರಾಮದಲ್ಲಿ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಆಯ್ಕೆಯಾದ ನಂತರ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ಮಂಜೂರಾಗಿದೆ. ಆದರೆ ಅಧಿಕಾರಿಗಳು ಚುನಾವಣೆಗಳ ನೀತಿ ಸಂಹಿತೆ ಹೆಸರಿನಲ್ಲಿ ಕಾಮಗಾರಿ ವಿಳಂಬ ಮಾಡಿದ್ದಾರೆಂದು ತರಾಟೆಗೆ ತೆಗೆದುಕೊಂಡರು. ರಾಮನಾಳ ಗ್ರಾಮದ ಸಮುದಾಯ ಭವನದ ಕಾಮಗಾರಿಯನ್ನು ಒಂದು ವಾರದಲ್ಲಿ ಆರಂಭಿಸುವಂತೆ ಶಾಸಕರು ಅಧಿಕಾರಿಗೆ ತಾಕೀತು ಮಾಡಿ, ಕೊಪ್ಪರ ಗ್ರಾಮದಲ್ಲಿ ಮುಸ್ಲಿಂ ಸಮಾಜದ ಶಾದಿ ಮಹಲ್ ನಿರ್ಮಾಣಕ್ಕೆ ಅನುದಾನ ನೀಡಿರುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜ ಪಾಟೀಲ್ ಇಟಗಿ, ವಿಎಸ್ಸೆಸ್ಸೆನ್ ಅಧ್ಯಕ್ಷ ಲಿಂಗನಗೌಡ ಬಿ., ಎಸ್‌ಡಿಎಂಸಿ ಅಧ್ಯಕ್ಷ ಬಾಬು, ಶೇಖರಪ್ಪ ಗೌಡ, ಗುರುನಾಥರಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ಸುಲ್ತಾನ ಬಾಬು, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಯಕ್ಬಾಲಸಾಬ್ ಹೌದುಡಿ, ಫಜಲುಲ್ಲಾ ಸಾಜೀದ್, ಪಿಕಾರ್ಡ್ ಬ್ಯಾಂಕಿನ ಮಾಜಿ ನಿರ್ದೇಶಕ ಅಮೀನಬಾಷಾ ಸೇರಿ ಅನೇಕರಿದ್ದರು.
ಬಸ್ ಡಿಕ್ಕಿ: 20 ಜನರಿಗೆ ಗಾಯ
ರಾಯಚೂರು: ತಾಲೂಕಿನ ಏಳು ಮೈಲ್ ಕ್ರಾಸ್ ಬಳಿ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ 20 ಪ್ರಯಾಣಿಕರಿಗೆ ಗಾಯವಾಗಿದೆ. ಏಳು ಮೈಲ್ ಕ್ರಾಸ್ ಬಳಿ ರಾಯಚೂರಿನಿಂದ ತೆರಳುತ್ತಿದ್ದ ಲಾರಿಯೊಂದಕ್ಕೆ ಆಕಳು ಅಡ್ಡಬಂದಿದ್ದು, ಅಪಘಾತ ತಪ್ಪಿಸಲು ದಿಢೀರ್ ಬ್ರೇಕ್ ಹಾಕಿದ್ದು ಲಾರಿ ಹಿಂದೆ ಸಾಗುತ್ತಿದ್ದ ರಾಯಚೂರು-ಸಿರವಾರ ಹಾಗೂ ರಾಯಚೂರು-ಬಳ್ಳಾರಿ ಬಸ್‌ಗಳ ಮಧ್ಯೆ ಡಿಕ್ಕಿಯಾಗಿದೆ. ಅದರಿಂದ ಬಸ್‌ನಲ್ಲಿದ್ದ 20 ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ ಪಲ್ಟಿ: ಒಬ್ಬನ ಸಾವು
ರಾಯಚೂರು: ದೇವದುರ್ಗ ತಾಲೂಕಿನ ಖಾನಾಪುರ-ಗಬ್ಬೂರು ರಸ್ತೆಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಅದರಲ್ಲಿ ಕುಳಿತಿದ್ದ ವ್ಯಕ್ತಿ ಸಾವಿಗೀಡಾಗಿದ್ದಾನೆ. ಮೃತನನ್ನು ಶಿವಪ್ಪ ಎಂದು ಗುರುತಿಸಲಾಗಿದೆ. ಈತ ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕ ವೇಗವಾಗಿ ನಡೆಸಿಕೊಂಡು ಹೊರಟಿದ್ದರಿಂದ ಟ್ರ್ಯಾಕ್ಟರಿನ ಬಲಗಡೆಯ ಮುಂದಿನ ಗಾಲಿ ಕಟ್ ಆಗಿ ಟ್ರ್ಯಾಕ್ಟರ್ ಟ್ರಾಲಿ ಸಮೇತ ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿ ಅದರಲ್ಲಿದ್ದ ಈತ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಬೆಂಕಿ ತಗುಲಿ ಮಹಿಳೆ ಸಾವು
ರಾಯಚೂರು: ದೇವದುರ್ಗ ತಾಲೂಕಿನ ವಂದಲಿ ಗ್ರಾಮದಲ್ಲಿ ಬೆಂಕಿ ತಗುಲಿ ಮಹಿಳೆಯೊಬ್ಬಳು ಸಾವಿಗೀಡಾಗಿದ್ದಾಳೆ. ಮೃತಳನ್ನು ಅಂತೋನಮ್ಮ(30) ಎಂದು ಗುರುತಿಸಲಾಗಿದೆ. ಈಕೆ ತನ್ನ ಮನೆಯಲ್ಲಿ ಕರೆಂಟ್ ಇಲ್ಲದ ಸಮಯದಲ್ಲಿ ಸೀಮೆಎಣ್ಣೆ ದೀಪಕ್ಕೆ ಬೆಂಕಿ ಹೊತ್ತಿಸುವ ವೇಳೆ ಆಕಸ್ಮಿಕವಾಗಿ ಆಕೆಯ ಮೈಗೆ ಬೆಂಕಿ ತಗುಲಿ ಸುಟ್ಟ ಗಾಯಗಳಿಂದ ಬಳಲಿ ಲಿಂಗಸ್ಗೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement