ಪರಿವರ್ತಕ ಅಳವಡಿಕೆ ಜೆಸ್ಕಾಂ ಅಧಿಕಾರಿ ನಿರ್ಲಕ್ಷ್ಯ
ಲಿಂಗಸ್ಗೂರು: ತಾಲೂಕಿನ ಆರ್ಯಭೋಗಾಪುರದಲ್ಲಿ ವಿದ್ಯುತ್ ಪರಿವರ್ತಕ ಸುಟ್ಟಿದ್ದು, ಬೇರೆ ಪರಿವರ್ತಕ ಅಳವಡಿಸುವಂತೆ ಜೆಸ್ಕಾಂ ಇಲಾಖೆ ಸೆಕ್ಷನ್ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ತಾಪಂ ಅಧ್ಯಕ್ಷ ರುದ್ರಗೌಡ ತುರಡಗಿ ಅವರಿಗೆ ಮನವಿ ಮಾಡಿದರು.
ಗ್ರಾಮದಲ್ಲಿ ಸುಮಾರು 250 ಕುಟುಂಬಗಳು ವಾಸಿಸುತ್ತಿದ್ದು, ವಿದ್ಯುತ್ ಪರಿವರ್ತಕ ಸುಟ್ಟು 5-6 ದಿನಗಳು ಕಳೆದಿವೆ. ಇದರಿಂದ ಕುಡಿಯುವ ನೀರು, ವಿದ್ಯುತ್ ಸಮಸ್ಯೆಯಿಂದ ಜನತೆ ಪರದಾಡುವಂತಾಗಿದೆ. ಗ್ರಾಮದಲ್ಲಿ ಒಂದೂ ಕೂಡ ಕೈಪಂಪ್ ಹಾಕಲಾಗಿಲ್ಲ. ಇದರಿಂದ ಕಿ.ಮೀ. ದೂರದ ಹಳ್ಳದ ವರತಿ ನೀರು ತರುವ ಪರಿಸ್ಥಿತಿ ಬಂದಿದೆ. ಮಳೆಯ ಅಭಾವದಿಂದ ಹಳ್ಳದ ನೀರು ಇಳಿಮುಖಗೊಂಡು ಹೊಂಡ ತುಂಬಿದ್ದು, ನೀರು ಸೇವನೆಯಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಬೇರೆ ಪರಿವರ್ತಕ ಅಳವಡಿಸುವಂತೆ ಮುದಗಲ್ ವಿಭಾಗದ ಜೆಸ್ಕಾಂ ಇಲಾಖೆ ಸೆಕ್ಷನ್ ಅಧಿಕಾರಿ ಮುದ್ದನಗೌಡರಿಗೆ ಮನವಿ ಮಾಡಿದರೆ ಮೇಲಧಿಕಾರಿಗಳಿಗೆ ಮನವಿ ಮಾಡಿದರೂ ಬೇಜವಾಬ್ದಾರಿ ತೋರಿದ್ದಾರೆ. ಲಿಂಗಸ್ಗೂರು ಜೆಸ್ಕಾಂ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ ನಮಗೆ ಮಾಹಿತಿಯಿಲ್ಲ. ವರದಿ ಸಲ್ಲಿಸಿದರೆ ಪರಿವರ್ತಕ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ಕೂಡಲೇ ಟಿಸಿ ಅಳವಡಿಸಲು ಕ್ರಮ ಕೈಗೊಂಡು ಜನತೆಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.
ಈ ವೇಳೆ ಗ್ರಾಮದ ಮುಖಂಡರಾದ ಶಶಿಧರಗೌಡ, ಸಿದ್ದನಗೌಡ, ಬಸವರಾಜ, ವೆಂಕಪ್ಪ ತಳವಾರ, ಶ್ರೀನಿವಾಸ ಪಾಟೀಲ್, ದೊಡ್ಡಪ್ಪ ಮನ್ನಾಪುರ, ರಾಮನಗೌಡ, ಅಂಬಣ್ಣ ಅರಳಿ ಇದ್ದರು.