ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಡದಂಡೆ ಕಾಲುವೆ ಸ್ಥಳಕ್ಕೆ ನೀರಾವರಿ ಅಧಿಕಾರಿಗಳ ಭೇಟಿ

Rashmi Kasaragodu
Updated On : 25 Jun 2014, 11:19 am

ಮಸ್ಕಿ: ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದ ರೈತರ ಅಕ್ರಮ ಪೈಪ್ಲೈನ್ ತೆರವಿಗೆ ಆಗ್ರಹಿಸಿ ಕೆಳಭಾಗದ ರೈತರು ಹೋರಾಟ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ಮುನಿರಾಬಾದ್ ಮುಖ್ಯ ಎಂಜಿನಿಯರ್ ಮಲ್ಲಿಕಾರ್ಜುನ ಗುಂಗೆ, ಲಿಂಗಸ್ಗೂರು ಸಹಾಯಕ ಆಯುಕ್ತ ಟಿ. ಯೋಗೇಶ್, ಎಸ್ಇ ಶಿವಕುಮಾರ ಸೇರಿ ವಿವಿಧ ಅಧಿಕಾರಿಗಳು ಸೋಮವಾರ ಇಲ್ಲಿಗೆ ಸಮೀಪದ ಕಾಲುವೆಯ 55ನೇ ಉಪಕಾಲುವೆ ಸ್ಥಳಕ್ಕೆ ಭೇಟಿ ನೀಡಿದರು.
ಕಾಲುವೆಯ ಮೇಲ್ಭಾಗದ ರೈತರು ತಮ್ಮ ಜಮೀನಿಗೆ ಕಂಡುಕೊಂಡಿರುವ ನೀರಿನ ಮೂಲಗಳನ್ನು ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಪರಿಶೀಲಿಸಿದರು. ಸಮೀಪದ ಉದ್ಬಾಳ(ಯು), ಹುಲ್ಲೂರು ಗ್ರಾಮಗಳ ವ್ಯಾಪ್ತಿಯಲ್ಲಿನ ಹಳ್ಳಗಳಿಗೆ ತೆರಳಿ ರೈತರ ಪಂಪ್ಸೆಟ್ಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮೇಲ್ಭಾಗದ ರೈತರು ನಾಲಾ ಅನುಮತಿ ಮತ್ತಿತರೆ ದಾಖಲಾತಿಗಳನ್ನು ಗುಂಗೆ ಅವರಿಗೆ ಮುಂದೆ ಪ್ರದರ್ಶಿಸಿದರು. ಇದಕ್ಕೂ ಮುನ್ನ ಮಲ್ಲಿಕಾರ್ಜುನ ಗುಂಗೆ ಅವರು ಮಸ್ಕಿ ನೀರಾವರಿ ಇಲಾಖೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಮಧ್ಯಾಹ್ನ 1 ಗಂಟೆ ಸುಮಾರು ನಾಲಾ ವ್ಯಾಪ್ತಿಯಲ್ಲಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಗೆ ಮುಂದಾದರು.
ರೈತರೊಂದಿಗೆ ಚರ್ಚೆ: ಕಾಲುವೆಯ ಮೇಲ್ಭಾಗದ ರೈತರ ನೀರಿನ ಮೂಲಗಳನ್ನು ವೀಕ್ಷಿಸಿದ ನಂತರ ಮಲ್ಲಿಕಾರ್ಜುನ ಗುಂಗೆ ಅವರು ಕೆಳಭಾಗದ ಕಾಲುವೆ ರೈತರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ರೈತರು ಎಲ್ಲ ಅಕ್ರಮ ಪೈಪ್ಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು. ಕರ್ನಾಟಕ ರಾಜ್ಯ ರೈತ ಸಂಘ(ಕೋಡಿಹಳ್ಳಿ ಬಣ)ದ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಿಗಿ, ಆರ್ವೈಎಫ್ಐ ರಾಜ್ಯ ಘಟಕ ಅಧ್ಯಕ್ಷ ಎಂ. ಗಂಗಾಧರ, ಕೆಆರ್ಎಸ್ ತಾಲೂಕು ಘಟಕ ಅಧ್ಯಕ್ಷ ರಮೇಶ ಪಾಟೀಲ್ ಭೇರ್ಗಿ, ನಾಗರಾಜ ಪೂಜಾರ್ ಸೇರಿ ಅನೇಕರಿದ್ದರು. ಮುನಿರಾಬಾದ್ನ ಚೀಫ್ ಎಂಜಿನಿಯರ್ 55ನೇ ಉಪಕಾಲುವೆ ಭೇಟಿ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಕಾವಲು ಹಾಕಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement