ಎಸ್ಬಿಐನಿಂದ ಸಭೆ
ರಾಯಚೂರು: ಭಾರತೀಯ ಸ್ಟೇಟ್ ಬ್ಯಾಂಕ್ನ ರಾಯಚೂರು ಶಾಖೆಯಿಂದ ಇತ್ತೀಚೆಗೆ ತಾಲೂಕಿನ ನಾಗನದೊಡ್ಡಿ ಗ್ರಾಮದಲ್ಲಿ ರೈತ ಸಂಪರ್ಕ ಸಭೆ ಆಯೋಜಿಸಲಾಗಿತ್ತು. ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ರಮೇಶ ಜೋಶಿ ಸಭೆಯಲ್ಲಿ ಮಾತನಾಡಿ, ಬ್ಯಾಂಕಿನಿಂದ ರೈತರಿಗೆ ದೊರೆಯಬಹುದಾದ ಸವಲತ್ತುಗಳ ಕುರಿತು ವಿವರಿಸಿ, ರೈತರು ಬ್ಯಾಂಕುಗಳಿಂದ ಸಿಗಬಹುದಾದ ಸವಲತ್ತುಗಳನ್ನು ಪಡೆದುಕೊಂಡು ತಮ್ಮ ಆರ್ಥಿಕ ಪ್ರಗತಿ ಸಾಧಿಸುವುದಲ್ಲದೆ ಗ್ರಾಮ ಹಾಗೂ ದೇಶದ ಪ್ರಗತಿಗೆ ಮುಂದಾಗುವಂತೆ ಮನವಿ ಮಾಡಿದರು. ಈ ಸಂದರ್ಭ ವಿಭಾಗೀಯ ವ್ಯವಸ್ಥಾಪಕ ಜಿ.ಡಿ. ತೋಟದ, ಮತ್ತು ಕೆ.ವಿ. ಕುಲಕರ್ಣಿ ಮಾತನಾಡಿದರು. ರೈತರಾದ ಯಲ್ಲನಗೌಡ, ಅಮರೇಶ, ಶ್ರೀನಿವಾಸ ಪಾಲ್ಗೊಂಡಿದ್ದರು.
ಅನಧಿಕೃತ ಕಾಲೇಜುಗಳು!
ರಾಯಚೂರು: ಜಿಲ್ಲೆಯಲ್ಲಿ 2014-15ನೇ ಸಾಲಿನಲ್ಲಿ ವಿವಿಧ ಸಂಸ್ಥೆಗಳ ಅಡಿ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಿದ್ದು, ಅನುಮತಿಯಿಲ್ಲ ಕಾಲೇಜುಗಳಿಗೆ ಪ್ರವೇಶ ಪಡೆಯದಂತೆ ಡಿಡಿಪಿಯು ಇಲಾಖೆ ತಿಳಿಸಿದೆ. ಲಿಂಗಸ್ಗೂರಿನ ಸರ್ ಎಂ. ವಿಶ್ವೇಶ್ವರಯ್ಯ ಸ್ವತಂತ್ರ ಜ್ಯೂನಿಯರ್ ಕಾಲೇಜು, ಎವಿಎಸ್ ಬ್ರಿಲಿಯೆಂಟ್ ಸೈನ್ಸ್, ಕಾಮರ್ಸ್ ಪಪೂ ಕಾಲೇಜು ಸಿಂಧನೂರು, ಸೈಯದ್ ಶಫೀಯಾ ಕಲಾ ವಾಣಿಜ್ಯ, ವಿಜ್ಞಾನ ಕಾಲೇಜು ರಾಯಚೂರು, ದೇವಸ್ಗೂರಿನ ಭುವನೇಶ್ವರಿ ಕಾಲೇಜು, ಮಾನವಿಯ ಪ್ರಗತಿ ಪಪೂ ಕಾಲೇಜು, ರಾಯಚೂರಿನ ಹೊಸೂರು ರಸ್ತೆಯಲ್ಲಿರುವ ವಿವೇಕಾನಂದ ಪಪೂ ಕಾಲೇಜು, ಮಾನವಿಯ ಕಳಿಂಗ ಕಾಲೇಜು, ಮುದಗಲ್ನ ಎಬಿಸಿ ಮಹಿಳಾ ಪಪೂ ಕಾಲೇಜು, ರಾಯಚೂರಿನ ಗಾಯತ್ರಿ ಹಾಗೂ ಸರ್ವೋದಯ ಪಪೂ ಕಾಲೇಜು, ಸಿಂಧನೂರಿನ ದುದ್ದುಪುಡಿ ಪಪೂ ಕಾಲೇಜು, ಸಿರವಾರದ ಸ್ವಾಮಿ ವಿವೇಕಾನಂದ ಪಪೂ ಕಾಲೇಜು, ರಾಯಚೂರಿನ ಅಲ್ ಕರೀಂ ಮಹಿಳಾ ಪಪೂ ಕಾಲೇಜು, ನೀರಮಾನವಿ ಕ್ಯಾಂಪಿನ ವೈಷ್ಣವಿ ವಂಶಿಕ ಗುಜ್ಜಲ್ ಸ್ವತಂತ್ರ ಪಪೂ ಕಾಲೇಜು, ಕನ್ನಾರಿ ಕಲಾ ವಾಣಿಜ್ಯ ಪಪೂ ಕಾಲೇಜು, ಮುದಗಲ್ನ ಗಂಗಣ್ಣ ಸ್ಮಾರಕ ಪಪೂ ಕಾಲೇಜು, ದೇವದುರ್ಗದ ಡಾನ್ ಬಾಸ್ಕೋ ಕಾಲೇಜು, ಮಾನವಿಯ ಸಿದ್ದಾರ್ಥ ಪಪೂ ಕಾಲೇಜುಗಳು ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಈ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಾರದು. ಹಾಗೊಂದು ವೇಳೆ ಪ್ರವೇಶ ಪಡೆದಲ್ಲಿ ಮುಂದಿನ ಆಗುಹೋಗುಗಳಿಗೆ ಪಾಲಕರು ಹಾಗೂ ವಿದ್ಯಾರ್ಥಿಗಳೇ ಜವಾಬ್ದಾರರಾಗುತ್ತಾರೆಂದು ಡಿಡಿಪಿಐ ಕಚೇರಿ ತಿಳಿಸಿದೆ.