ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮದ್ಯದಂಗಡಿ ಬಂದ್ಗೆ ಆಗ್ರಹ ನಾಳೆ ಆಯುಕ್ತರ ಭೇಟಿ

Rashmi Kasaragodu
Updated On : 25 Jun 2014, 11:19 am

ಕ.ಪ್ರ. ವಾರ್ತೆ    ರಾಯಚೂರು    ಜೂ. 24
ನಗರದ ನೇತಾಜಿ ನಗರ ವೃತ್ತದ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀ ಮದ್ಯದ ಅಂಗಡಿ ಬಂದ್ಗೆ ನಡೆಸುತ್ತಿರುವ ಹೋರಾಟ ಯಾವುದೇ ಕಾರಣಕ್ಕೆ ನಿಲ್ಲದು ಎಂದು ಹೋರಾಟಗಾರರು ತಿಳಿಸಿದ್ದಾರೆ.
ಮದ್ಯದ ಅಂಗಡಿಯ ಪರವಾನಗಿ ರದ್ದತಿ ಹಾಗೂ ಮುಚ್ಚಿಸುವಂತೆ ಆಗ್ರಹಿಸಿ ಜೂ.26ಕ್ಕೆ ಬೆಂಗಳೂರಿಗೆ ನಿಯೋಗ ಕೊಂಡೊಯ್ಯಲಾಗುತ್ತದೆ. ರಾಜ್ಯ ಅಬಕಾರಿ ಆಯುಕ್ತರ ಅಸಡ್ಡೆ ಮುಂದುವರಿದರೆ ಅವರ ಕಚೇರಿಗೆ ಬೀಗ ಹಾಕಲಾಗುತ್ತದೆ ಎಂದು ನೇತಾಜಿನಗರ ಸಾರ್ವಜನಿಕ ಸಮಸ್ಯೆಗಳ ಪರಿಹಾರ ಹೋರಾಟ ಸಮಿತಿ ಅಧ್ಯಕ್ಷ ಎಂ.ಕೆ. ಬಾಬರ್ ಎಚ್ಚರಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೇತಾಜಿ ನಗರದ ವೃತ್ತದಲ್ಲಿ ಧಾರ್ಮಿಕ ಕೇಂದ್ರಗಳ ಬಳಿಯೇ ಲಕ್ಷ್ಮೀ ಮದ್ಯದ ಅಂಗಡಿಯಿದ್ದು, ನಿಯಮ ಉಲ್ಲಂಘಿಸಿ ನಿರ್ವಹಿಸುತ್ತಿರುವ ಅಂಗಡಿಯನ್ನು ಮುಚ್ಚಿಸಲು ಜಿಲ್ಲಾಧಿಕಾರಿ, ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳ ಗಮನಕ್ಕೂ ತರಲಾಗಿದೆ. ಆದರೆ ಅದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು,
ಮದ್ಯದ ಅಂಗಡಿಯ ಮಾಲೀಕರು ಈಗ ಅಬಕಾರಿ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಅಂಗಡಿಯ ನವೀಕರಣಕ್ಕಾಗಿ ಅನುಮತಿ ಕೋರಿದೆ. ಇದು ಖಂಡನೀಯ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯ ಅಬಕಾರಿ ಇಲಾಖೆ ಆಯುಕ್ತರು ಜೂ.26ರಂದು ಅಬಕಾರಿ ಜಿಲ್ಲಾಧಿಕಾರಿಗೆ ಮದ್ಯದ ಅಂಗಡಿಯವರ ಮೇಲ್ಮನವಿ ಅರ್ಜಿ ಪರಿಶೀಲಿಸುವಂತೆ ಸೂಚಿಸಿದ್ದನ್ನು ಖಂಡಿಸಿದರು.
ಬೆಂಗಳೂರು ಚಲೋ: ಎಲ್ಲ ಲೋಪದೋಷಗಳು ಹಾಗೂ ನಿರಂತರ ಹೋರಾಟ ಮಾಡಿದರೂ ಯಾವುದೇ ರೀತಿಯ ಸ್ಪಂದನೆ ಲಭಿಸದ ಹಿನ್ನೆಲೆ ಹಾಗೂ ಆಯುಕ್ತರ ಏಕಪಕ್ಷೀಯ ನಿರ್ಧಾರ ಖಂಡಿಸಿ ಜೂ.26ರಂದು ಸಮಿತಿಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 100ಕ್ಕೂ ಹೆಚ್ಚು ಜನರು ಬೆಂಗಳೂರಿಗೆ ತೆರಳಿ ಆಯುಕ್ತರು ಮತ್ತು ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಮದ್ಯದ ಅಂಗಡಿ ನವೀಕರಣಕ್ಕೆ ಅವಕಾಶ ನೀಡಬಾರದು. ಅಂಗಡಿಯನ್ನು ಮುಚ್ಚಿಸಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಅಬಕಾರಿ ಆಯುಕ್ತರು ನಿರ್ಲಕ್ಷ್ಯ ತೋರಿದಲ್ಲಿ ಅವರ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಈ ಸಂದರ್ಭ ಸಮಿತಿ ಪದಾಕಾರಿಗಳಾದ ಮೊಹ್ಮದ್ ರಸೂಲ್, ಮೊಹ್ಮದ್ ನೂರ್, ಮೊಹ್ಮದ್ ಶಂಶಾಲಂ, ಚಿನ್ನ, ಶೇಖರಪ್ಪ, ವೆಂಕಟ ಸುಬ್ಬಣ್ಣ, ಸಂಗಮೇಶ್ ರಾವ್, ನಾಗರಾಜ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement