ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಾಣಾ ಪ್ರತಾಪ್ ಸಿಂಗ್ ಜಯಂತ್ಯುತ್ಸವಕ್ಕೆ ಆಗ್ರಹ

Rashmi Kasaragodu
Updated On : 25 Jun 2014, 11:55 am

ಮುದಗಲ್: ದೇಶಕ್ಕಾಗಿ ಜೀವನವನ್ನೇ ಪಣವಾಗಿಟ್ಟು ಹೋರಾಡಿದ ರಜಪೂತ ಸಮಾಜದ ಆರಾಧ್ಯ ದೇವ ಮಹಾರಾಣಾ ಪ್ರತಾಪ್ಸಿಂಗ್ರ ಜಯಂತ್ಯುತ್ಸವವನ್ನು ಸರ್ಕಾರದಿಂದ ಆಚರಣೆ ಮಾಡಲು ಆದೇಶ ನೀಡಬೇಕು ಎಂದು ಅಖಿಲ ಕರ್ನಾಟಕ ರಜಪೂತ ಮಹಾಸಭಾದ ರಾಜ್ಯಾಧ್ಯಕ್ಷ ಬಾಲಾಜಿ ಸಿಂಗ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಪಟ್ಟಣದಲ್ಲಿ ಮಹಾರಾಣಾ ಪ್ರತಾಪ್ಸಿಂಗ್ರ 475ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದಾಕ್ಷಣ ಎಲ್ಲ ಜಾತಿಗಳ ಸಮಾವೇಶ ಮಾಡಿದರು. ಆದರೆ ರಜಪೂತ ಸಮಾವೇಶ ಮಾಡಲಿಲ್ಲ. ಸರ್ಕಾರ ಕೂಡಲೇ ಮುಂದಿನ ವರ್ಷಕ್ಕೆ ಅನ್ವಯವಾಗುವಂತೆ ಸರ್ಕಾರದಿಂದ ಜಯಂತಿ ಆಚರಣೆ ಮಾಡಲು ಆದೇಶ ನೀಡಬೇಕು. ಇಲ್ಲದಿದ್ದರೆ ಸಮಾಜ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರು: ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಕೇಂದ್ರ ಸರ್ಕಾರದಲ್ಲಿ 40 ಸಂಸದರು, 9 ಕೇಂದ್ರ ಸಚಿವರು ರಜಪೂತ ಸಮಾಜದವರಿದ್ದಾರೆ. ಆದರೆ ಕರ್ನಾಟಕದಲ್ಲಿ ರಜಪೂತರು ಅಲ್ಪಸಂಖ್ಯಾತರಾಗಿದ್ದೇವೆ. ಸಮಾಜವನ್ನು ಪ್ರವರ್ಗ '2ಎ'ಕ್ಕೆ ಸೇರಿಸಿದ್ದರಿಂದ ಸರ್ಕಾರದ ಸೌಲಭ್ಯಗಳು ಅನ್ಯ ಜಾತಿಯವರ ಪಾಲಾಗುತ್ತಿವೆ. ರಾಜ್ಯದಲ್ಲಿ ಅಲ್ಪ ಸಂಖ್ಯೆಯಲ್ಲಿರುವ ರಜಪೂತರು ಸಂಘಟಕರಾಗಿ ಹೋರಾಟ ಮಾಡುವ ಮೂಲಕ ಸೌಲಭ್ಯಗಳನ್ನು ಪಡೆಯಬೇಕು. ಶೈಕ್ಷಣಿಕ, ಸಾಮಾಜಿಕವಾಗಿ ಮುಂದೆ ಬರಬೇಕು ಎಂದರು.
ನಿಂತ ನೀರಾಗಬಾರದು: ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಖಂಡ ಡಾ. ಗುರುರಾಜ ದೇಶಪಾಂಡೆ, ಗುರುಬಸಪ್ಪ ಸಜ್ಜನ್, ರಾಜ್ಯ ರಜಪೂತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಅನಂತರಾಮ ಸಿಂಗ್, ಗಂಗಾವತಿಯ ಅನ್ನಪೂರ್ಣ ಸಿಂಗ್ ಮಾತನಾಡಿ, ಸಮಾಜದ ಸಂಘಟನೆ ನಿಂತ ನೀರಾಗದೆ ಹರಿಯುವ ನೀರಾಗಬೇಕು. ಜಯಂತ್ಯುತ್ಸವಗಳು ಕೇವಲ ಆಚರಣೆಗೆ ಸೀಮಿತವಾಗದೆ, ಅನ್ಯಾಯದ ವಿರುದ್ಧ ಹೋರಾಟವನ್ನು, ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ನಿರತವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ದಶರಥಸಿಂಗ್, ಶಿವಲಾಲ್ ಸಿಂಗ್, ಶ್ಯಾಮ್ ಸಿಂಗ್, ಲಕ್ಷ್ಮಣ ಸಿಂಗ್, ಮೋತಿಲಾಲ್ ಸಿಂಗ್, ನರಸಿಂಗ್ ತಾವರಗೇರಾ, ಪಾಂಡುರಂಗ ಸಿಂಗ್, ,ಅಮರಸಿಂಗ್, ಭವಾನಿಸಿಂಗ್, ಶಂಕರಸಿಂಗ್, ಭೀಮಸಿಂಗ್, ಅಶ್ವತಸಿಂಗ್, ಕಿಶನ್ ಸಿಂಗ್, ದಶರಥಸಿಂಗ್, ನಾರಾಯಣಸಿಂಗ್, ಶಾಮಸಿಂಗ್, ವೆಂಕಟಸಿಂಗ್, ಉದಯಸಿಂಗ್, ಮೋಹನ್ಸಿಂಗ್ ಸೇರಿದಂತೆ ರಜಪೂತ ಸಮಾಜದವರು ಭಾಗವಹಿಸಿದ್ದರು. ಅಮರೇಶ ಮೈಲಾಪೂರ ಕಾರ್ಯಕ್ರಮ ನಿರೂಪಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೃತ್ಯ ಮಾಡುವ ಮೂಲಕ ಸಂಭ್ರಮದಿಂದ ಮಹಾರಾಣಾ ಪ್ರತಾಪ್ಸಿಂಗ್ರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement