ದುಶ್ಚಟಗಳಿಗೆ ಬಲಿಯಾಗಬೇಡಿ
ಮುದಗಲ್: ವಿದ್ಯಾರ್ಥಿಗಳು ಈ ದೇಶದ ಸಂಪತ್ತು. ಆದ್ದರಿಂದ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಪ್ರಾಂಶುಪಾಲ ಜಿ.ಬಸವರಾಜ ಹೇಳಿದರು.
ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಠಾಣೆ ಮುದಗಲ್ ಹಾಗೂ ಕಾಲೇಜಿನ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಗುಟ್ಕಾ, ಸಿಗರೇಟ್, ಮದ್ಯಪಾನಗಳ ದುಶ್ಚಟಗಳಿಗೆ ದಾಸರಾಗದೆ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಪ್ರಮುಖವಾದದು. ಹಣ. ಆಸ್ತಿ ಕಳೆದುಕೊಂಡರೆ ಮತ್ತೆ ಪಡೆದುಕೊಳ್ಳಬಹುದು ಆದರೆ ಆರೋಗ್ಯ ಕಳೆದುಕೊಂಡರೆ ಮತ್ತೆ ಮರಳಿ ಸಿಗದು ಎಂದು ತಿಳಿಸಿದರು. ಈ ವಯಸ್ಸು ಜೀವನವನ್ನು ರೂಪಿಸಿಕೊಳ್ಳುವ ಅವಶ್ಯಕವಾಗಿದೆ ಎಂದರು.
ಎಎಸ್ಐ ಈರಣ್ಣ ಮಾತನಾಡಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳಿಗೆ ಬಲಿಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಲಾಖೆಯಿಂದ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಯುವಕರು ಈ ದೇಶದ ಶಕ್ತಿಯಾಗಿದ್ದು ಉತ್ತಮ ನಾಗರಿಕರಾಗಿ ಬದುಕಲು ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಮನವಿ ಮಾಡಿದರು.
ಉಪನ್ಯಾಸಕ ಅಹ್ಮದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಪೇದೆಗಳಾದ ಲಕ್ಷ್ಮಣ, ಗೋಪಾಲ ಉಪಸ್ಥಿತರಿದ್ದರು.