ಅಪೌಷ್ಟಿಕತೆ ನಿವಾರಣೆ ವರದಿ ಜಾರಿಗೆ ನಿಗಾ ವಹಿಸಿ
ರಾಯಚೂರು: ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ತಾವು ನೀಡಿದ ವರದಿಯ ಅನುಷ್ಠಾನಕ್ಕೆ ನಿಗಾ ವಹಿಸುವ ಹೊಣೆಗಾರಿಕೆ ಸಮಾಜದ ಮೇಲಿದೆ. ಮಗುವಿನ ಸರ್ವಾಂಗೀಣ ಪ್ರಗತಿಗೆ ಪೂರಕ ಪರಿಸರ ನಿರ್ಮಿಸುವ ಹೊಣೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಂಘ ಸಂಸ್ಥೆಗಳು ಹಾಗೂ ಪೋಷಕರದ್ದಾಗಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾ. ಎನ್.ಕೆ. ಪಾಟೀಲ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳಿಗೆ ನ್ಯಾಯಯುತವಾದ ಮೂಲಸೌಲಭ್ಯಗಳನ್ನು ಒದಗಿಸುವುದು ಸರ್ಕಾರಗಳ ಕೆಲಸ. ಹಾಗೆಯೇ ಸೂಕ್ತ ಸಮಯದಲ್ಲಿ ಮಗುವಿಗೆ ಪೌಷ್ಟಿಕ ಆಹಾರ ದೊರಕಿಸುವ ಹಾಗೂ ವೈದ್ಯಕೀಯ ಸೇವೆ ನೀಡುವ ಕಾರ್ಯ ಮಾಡುವುದು ಅಧಿಕಾರಸ್ಥರದ್ದು ಎಂದರು. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಸಂಬಂಧಿಸಿ ರಾಜ್ಯ ಸರ್ಕಾರವು ತಮ್ಮ ನೇತೃತ್ವದ ಸಮಿತಿಯು ಸಲ್ಲಿಸಿದ ಅಧ್ಯಯನ ವರದಿಯ ಶಿಫಾರಸನ್ನು ಯಥಾವತ್ತಾಗಿ ಜಾರಿಗೆ ತರುವುದಾಗಿ ಉಚ್ಚ ನ್ಯಾಯಾಲಯದ ಎದುರು ಒಪ್ಪಿಕೊಂಡಿದೆ. ಹೀಗಾಗಿ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಎಲ್ಲರೂ ಕೈಜೋಡಿಸುವುದು ಅವಶ್ಯ ಎಂದು ಹೇಳಿದರು.
ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಿ: ಆಹಾರ ಭದ್ರತೆಗೆ ಸಂಬಂಧಿಸಿ ಸುಪ್ರೀಂಕೋರ್ಟಿನಲ್ಲಿ ದಾವೆ ವಿಚಾರಣೆ ಹಂತದಲ್ಲಿರುವುದರಿಂದ ಅಪೌಷ್ಟಿಕತೆಗೆ ಸಂಬಂಧಿಸಿದ ವರದಿಯ ಸಂಪೂರ್ಣ ಜಾರಿಗೆ ತೊಡಕಾಗಿದೆ ಎಂದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಯೋಜನಾಬದ್ಧ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಅಗತ್ಯ ಎಂದು ತಿಳಿಸಿದರು.
ರಾಜ್ಯದ ರಾಯಚೂರು, ಬೀದರ್, ಬಿಜಾಪುರ, ಬೆಳಗಾವಿಯ ಎರಡು ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.