ವಸತಿ ಯೋಜನೆ ಹಣ ಬಿಡುಗಡೆಗೆ ರೈತ ಸಂಘ ಆಗ್ರಹ
ರಾಯಚೂರು: ತಾಲೂಕಿನ ಯಾಪಲದಿನ್ನಿ ಗ್ರಾಪಂ.ಗೆ ಮಂಜೂರಾದ ವಿವಿಧ ವಸತಿ ಯೋಜನೆ ಮನೆಗಳಿಗೆ ಅನುದಾನ ಬಿಡುಗಡೆಗೆ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ. ಜಿಪಂ ಸಿಇಒಗೆ ಶುಕ್ರವಾರ ಮನವಿ ಸಲ್ಲಿಸಿರುವ ಸಂಘದ ಕಾರ್ಯಕರ್ತರು, ಯಾಪಲದಿನ್ನಿ ಗ್ರಾಪಂ ವ್ಯಾಪ್ತಿಯಲ್ಲಿ 2011- 12ರಿಂದ 2014-15ರ ವರೆಗೆ ವಿವಿಧ ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ಫಲಾನುಭವಿಗಳಿಂದ ಹಣ ಪಡೆದು ಮನೆ ನಿರ್ಮಿಸದಿರುವವರಿಗೂ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ದೂರಿದರು.
3ನೇ ಕಂತಿನ ಹಣ ನೀಡುತ್ತಿಲ್ಲ: ಫಲಾನುಭವಿಗಳ ಮನೆಗಳ ಫೋಟೋ ತೆಗೆದು ಜಿಪಿಎಸ್ ಮಾಡಿದ್ದರೂ ಫಲಾನುಭವಿಗಳಿಗೆ ಮೊದಲ ಮತ್ತು ಎರಡನೇ ಕಂತಿನ ಹಣ ಮಾತ್ರ ನೀಡಲಾಗಿದೆ. ಮೂರನೇ ಕಂತಿನ ಹಣ ನೀಡದೇ ಅಧಿಕಾರಿಗಳು ಫಲಾನುಭವಿಗಳನ್ನು ಅಲೆದಾಡಿಸುತ್ತಿದ್ದಾರೆಂದು ಆರೋಪಿಸಿದರು. ಗ್ರಾಪಂ ಪಿಡಿಒಗಳು ಫಲಾನುಭವಿಗಳಿಗೆ ವಿನಾಕಾರಣ ಹಣದ ಪಾವತಿಯಲ್ಲಿ ವಿಳಂಬ ಮಾಡುತ್ತಿದ್ದಾರೆ. ಇದೇ ಗ್ರಾಮದಲ್ಲಿ ಕೆಲವರಿಗೆ ಕಾಮಗಾರಿ ಆರಂಭಗೊಳ್ಳುವ ಮುನ್ನವೇ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ದೂರಿದರು.