ಸಿಂಧನೂರು, ಮಸ್ಕಿ ಶಾಸಕರಿಂದ ಕೀಳು ರಾಜಕಾರಣ
ಸಿಂಧನೂರು: ಸಿಂಧನೂರು ಮತ್ತು ಮಸ್ಕಿ ಶಾಸಕರು ಟೆಂಡರ್ ಪಡೆದ ಗುತ್ತಿಗೆದಾರರನ್ನು ಹಿಂದೆ ಸರಿಸಿ ತಮ್ಮ ಕಾರ್ಯಕರ್ತರಿಗೆ ವಿತರಣಾ ಕಾಲುವೆಗಳ ಕಾಮಗಾರಿ ನಿರ್ವಹಣೆ ವಹಿಸಿ ಕೀಳು ರಾಜಕಾರಣ ಮಾಡುತ್ತಿದ್ದಾರೆಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಆರೋಪಿಸಿದರು. ನಗರದ ಸತ್ಯಾ ಗಾರ್ಡನ್‌ನಲ್ಲಿ ಬಿಜೆಪಿ ತಾಲೂಕು ಸಮಿತಿಯಿಂದ ಏರ್ಪಡಿಸಿದ್ದ ಕಾರ್ಯಕರ್ತರಿಗೆ ಅಭಿನಂದನೆ, ಸಂಸದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕಾನೂನುಬದ್ಧವಾಗಿ ಟೆಂಡರ್ ಪಡೆದ ಗುತ್ತಿಗೆದಾರರನ್ನು ಪರೋಕ್ಷವಾಗಿ ಬೆದರಿಸಿ ಕಾರ್ಯಕರ್ತರಿಗೆ ಹಣ ಮಾಡಿಕೊಳ್ಳಲು ಅನುಕೂಲ ಮಾಡುವ ಶಾಸಕರಿಂದ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ರಸ್ತೆ, ಒಳಚರಂಡಿ, ಕುಡಿವ ನೀರು ಮತ್ತಿತರ ಯೋಜನೆ ಕಾಮಗಾರಿಗಳಿಗೆ ಗುತ್ತಿಗೆದಾರರು ಟೆಂಡರ್ ಹಾಕುತ್ತಿಲ್ಲವೆಂದು ಶಾಸಕ ಹೇಳುತ್ತಿದ್ದಾರೆ. ನಿಜಕ್ಕೂ ಅವರು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ಶಾಸಕರ ಪರ್ಸೆಂಟೇಜ್ ಪ್ರಮಾಣ ಹೆಚ್ಚಿಸಿದ್ದರಿಂದ ಗುತ್ತಿಗೆದಾರರು ಅರ್ಜಿ ಹಾಕಲು ಹಿಂಜರಿಯುತ್ತಿದ್ದಾರೆಂದು ದೂರಿದರು.