ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಭಿವೃದ್ಧಿಯಲ್ಲಿ ಹಿಂದುಳಿಯುವಿಕೆಗೆ ಕಾಂಗ್ರೆಸ್ ಆಡಳಿತವೇ ಕಾರಣ: ಟೀಕೆ

Rashmi Kasaragodu
Updated On : 3 Mar 2014, 11:16 am

ಮಸ್ಕಿ: ದೇಶವು ಅಭಿವೃದ್ಧಿಯಲ್ಲಿ ಹಿಂದುಳಿಯಲು ಕಾಂಗ್ರೆಸ್‌ನ ಆಳ್ವಿಕೆಯೇ ಕಾರಣ ಎಂದು ಆರೋಪಿಸಿದ ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಗಣ್ಣ ಕರಡಿ, ನೆರೆಯ ರಾಷ್ಟ್ರಗಳಿಗೆ ಹೋಲಿಕೆ ಮಾಡಿದಾಗ ದೇಶದ ಪ್ರಗತಿ ಕುಂಠಿತಗೊಂಡಿರುವುದು ಸ್ಪಷ್ಟವಾಗುತ್ತದೆ. ಅದಕ್ಕೆ ಅನೇಕ ದಶಕಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಹೊಣೆ ಎಂದು ಟೀಕಿಸಿದರು.
ಅವರು ಪಟ್ಟಣದ ಭ್ರಮರಾಂಬಾ ಕಲ್ಯಾಣ ಮಂಟಪದ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಬಿಜೆಪಿ-ಕೆಜೆಪಿ ವಿಲೀನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ನದಿ ಜೋಡಣೆ ಮೂಲಕ ನೀರಾವರಿ ಸೌಲಭ್ಯ ಹೆಚ್ಚಿಸುವಂಥ ಕನಸನ್ನು ಮಾಜಿ ಪ್ರಧಾನಿ ವಾಜಪೇಯಿ ಕಂಡಿದ್ದರು. ಅಂಥ ಮಹಾತ್ವಾಕಾಂಕ್ಷೆಯ ಯೋಜನೆ ನನಸಾಗಿಸಲು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಬೆಂಬಲಿಸುವಂತೆ ಮತದಾರರ ಮನವೊಲಿಸಲು ಮನವಿ ಮಾಡಿದರು.
ಯಶಸ್ಸಿನ ರ್ಯಾಲಿ: ಲೋಕಸಭಾ ಚುಣಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ. ಯುವಕರೆಲ್ಲರೂ ನರೇಂದ್ರ ಮೋದಿಯವರತ್ತ ಆಕರ್ಷಿತರಾಗಿದ್ದಾರೆ. ಭಾರತ ಗೆಲ್ಲಿಸಿ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ನರೇಂದ್ರ ಮೋದಿ ಅವರ ರ್ಯಾಲಿಗಳು ಅಭೂತಪೂರ್ವ ಯಶಸ್ಸು ಕಂಡಿವೆ ಎಂದು ಹೇಳಿದರು.
ಮುಂದಿನ ವಾರ ಮಸ್ಕಿ ಹಾಗೂ ತುರ್ವಿಹಾಳನಲ್ಲಿ ಬಿಜೆಪಿ - ಕೆಜೆಪಿ ವಿಲೀನ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅನೇಕರು ಆಕಾಂಕ್ಷಿಗಳಿದ್ದು, ಹೈಕಮಾಂಡ್ ಸೂಚಿಸುವವರಿಗೆ ಬೆಂಬಲಿಸಿ ಗೆಲವಿಗೆ ಶ್ರಮಿಸುವುದಾಗಿ ತಿಳಿಸಿದರು.
ಭ್ರಷ್ಟಾಚಾರವೇ ಸಾಧನೆ: ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಕೆ. ವಿರೂಪಾಕ್ಷಪ್ಪ ಮಾತನಾಡಿ, ಭ್ರಷ್ಟಾಚಾರ ನಡೆಸಿದ್ದೇ ಕಾಂಗ್ರೆಸ್ ಪಕ್ಷದ ಇದುವರೆಗಿನ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಮುಖಂಡರಾದ ಹಿರೇಮಠ ವಕೀಲರು, ಮಲ್ಲಪ್ಪ ಚಿತ್ತಾಪುರ, ಕೆಜೆಪಿ ಮುಖಂಡ ಹಾಗೂ ಜಿಪಂ ಸದಸ್ಯ ಮಹದೇವಪ್ಪಗೌಡ ಮಾತನಾಡಿದರು. ಶೇಷಗಿರಿರಾವ್, ರಾಜಶೇಖರ ಪಾಟೀಲ್, ಕೆ. ವೀರನಗೌಡ, ತಿಮ್ಮನ ಗೌಡ ಗುಡದೂರ, ಬಸನಗೌಡ ಪಾಟೀಲ್ ತಿಡಿಗೋಳ್, ಶಾಂತನಗೌಡ ಪಾಟೀಲ್, ಶಂಕರ್ ಮೇದಾರ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹನುಮೇಶ ನಾಯಕ ಬಳಗಾನೂರು, ಬಸನಗೌಡ ತುರುವಿಹಾಳ, ಸಿಂಧನೂರು ಬಿಜೆಪಿ ಬ್ಲಾಕ್ ಅಧ್ಯಕ್ಷ ದೇವೇಂದ್ರಪ್ಪ ನಾಯಕ,  ಮಸ್ಕಿ ಬಿಜೆಪಿ ಬ್ಲಾಕ್ ಅಧ್ಯಕ್ಷ ಸಂಗಮೇಶ ಹತ್ತಿಗುಡ್ಡ ಸೇರಿ ಅನೇಕರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement