ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕಾಲುವೆ ಕೊನೆ ಭಾಗದ ರೈತರು
ಅಮರೇಶಸ್ವಾಮಿ ಬಲ್ಲಟಗಿ
ಕ.ಪ್ರ. ವಾರ್ತೆ ಲಿಂಗಸ್ಗೂರು ಮಾ.2
ತಾಲೂಕಿನ ನಾರಾಯಣಪುರ ಬಲದಂಡೆ ಹಾಗೂ ರಾಂಪೂರ ಏತನೀರಾವರಿ ಕಾಲುವೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಹಣ ಹಾಗೂ ಬೆವರು ಸುರಿಸಿ ಬತ್ತ ಬೆಳೆದ ರೈತರು ಸೂಕ್ತ ಬೆಂಬಲ ಬೆಲೆ, ಮಾರುಕಟ್ಟೆ ವ್ಯವಸ್ಥೆ ಹಾಗೂ ಖರೀದಿದಾರರಿಲ್ಲದೆ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ತಾಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಎಕರೆಗೆ 10ರಿಂದ 15 ಸಾವಿರ ಖರ್ಚು ಮಾಡಿ ಹೇರಳವಾಗಿ ಬತ್ತ ಬೆಳೆದಿದ್ದಾರೆ. ಆದರೆ ಸೂಕ್ತ ಧಾರಣೆ ಇಲ್ಲದೆ ರೈತರ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದ್ದು, ರಸಗೊಬ್ಬರ, ಕ್ರಿಮಿ ಕೀಟನಾಶಕ, ಕೃಷಿ ಕೂಲಿಕಾರರಿಗೆ ಹಣ ನೀಡಲು ಪರದಾಡುವ ರೈತರು ಹತಾಶೆಗೊಂಡಿದ್ದಾರೆ. ಆರಂಭದ ಬೆಳೆಯಾಗಿ ಬತ್ತವನ್ನು ಬೆಳೆದು ಸಾವಿರಾರು ಚೀಲಗಳನ್ನು ಸಂಗ್ರಹಿಸಿದಾಗ ಕೇಳುವವರಿಲ್ಲದಾಗಿತ್ತು. ಕೊನೆಗೂ ರೈತರ ಹೋರಾಟಕ್ಕೆ ಮಣಿದ ಸರ್ಕಾರ ರಾಯಚೂರು, ಮಾನವಿ, ಸಿಂಧನೂರಲ್ಲಿ ಬತ್ತ ಖರೀದಿ ಕೇಂದ್ರ ಆರಂಭಿಸಿ ಪ್ರೋತ್ಸಾಹ ಧನದ ಜೊತೆ ಖರೀದಿಗೆ ಮುಂದಾಯಿತು.
ಬೇಸತ್ತ ರೈತರು: ಆದರೆ ಸರ್ಕಾರ ನಾರಾಯಣಪೂರ ಬಲದಂಡೆ ವ್ಯಾಪ್ತಿಯ ಲಿಂಗಸ್ಗೂರು ಹಾಗೂ ದೇವದುರ್ಗ ತಾಲೂಕುಗಳಲ್ಲಿ ಖರೀದಿ ಕೇಂದ್ರ ಆರಂಭಿಸದೆ ಕಡೆಗಣಿಸಿ ಮಲತಾಯಿ ಧೋರಣೆ ತೋರಿತು. ಪರಿಣಾಮ ತಾಲೂಕಿನ ಬತ್ತ ಖರೀದಿಸುವವರಿಲ್ಲದೆ ರೈತರು ತೊಳಲಾಟಕ್ಕೆ ಸಿಲುಕಿದ್ದು, ಸಂಗ್ರಹಿಸಿಟ್ಟ ಬತ್ತದ ಕುಂಪಿಗಳ ಮುಂದೆ ಹಪಹಪಿಸುಂತಾಗಿದೆ. ಸಾಲಗಾರರ ಕಾಟಕ್ಕೆ ಬೇಸತ್ತ ರೈತರು ಊರು ಬಿಡುವಂತಾಗಿದೆ.
ಒಂದೆಡೆ ಪ್ರಕೃತಿ ವೈಫಲ್ಯ, ಮತ್ತೊಂದೆಡೆ ಸೂಕ್ತ ಮಾರುಕಟ್ಟೆ ಇಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿನ ಸಮರ್ಪಕ ಸೌಲಭ್ಯವಿರುವ ರೈತರು ಮುಂಚಿತವಾಗಿ ಬತ್ತ ನಾಟಿ ಮಾಡಿ ಬೆಳೆದು ಉತ್ತಮ ಧಾರಣಿಗೆ ಮಾರಾಟ ಮಾಡಿದ್ದಾರೆ. ಆದರೆ ನೀರಿನ ಸೌಕರ್ಯ ಸಮರ್ಪಕವಾಗಿಲ್ಲದ ಹಾಗೂ ಟೇಲ್ಯಾಂಡ್ ರೈತರು ಸಕಾಲಕ್ಕೆ ನಾಟಿ ಮಾಡಲಾಗದ ಕಾರಣ ಫಸಲು ಜ.15ರ ನಂತರ ಕೈಸೇರಿದೆ.
ರೈತರಿಗೆ ಗಾಯದ ಮೇಲೆ ಬರೆ: ಖರೀದಿದಾರರು ಬತ್ತ ಖರೀದಿಗೆ ಬರುವ ನಿರೀಕ್ಷೆಯಲ್ಲಿ ರೈತರು ಚಾತಕಪಕ್ಷಿಯಂತೆ ಕಾದು ಕುಳಿತಿದ್ದಾರೆ. ಜಮೀನು ಹಾಗೂ ಮನೆ ಮುಂದೆ ರಾಶಿ ರಾಶಿ ಬತ್ತ ಸಂಗ್ರಹಿಸಿ ಹಗಲು, ರಾತ್ರಿ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಏತನ್ಮಧ್ಯೆ ಮಳೆ ಬಂದರೆ ಹಾನಿ ಸಂಭವಿಸುವ ಭೀತಿ ರೈತರಲ್ಲಿ ಆತಂಕ ಮೂಡಿಸಿದೆ. ಜ.15ರ ನಂತರ ಬತ್ತಕ್ಕೆ ಬೆಂಬಲ ಬೆಲೆ ನಿಲ್ಲಿಸಲಾಯಿತು. ಮತ್ತು ದರ ಕುಸಿತದ ಹೊಡೆತಕ್ಕೆ ಸಿಲುಕಿದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
'ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಬತ್ತ 1,700ರ ವರೆಗೆ ಮಾರಾಟವಾಗಿತ್ತು. ಆದರೆ ಈ ವರ್ಷ ಆರಂಭದಲ್ಲಿ ಬತ್ತ 1,350ರಿಂದ 1,400ರ ವರೆಗೆ ಮಾರಾಟವಾಯಿತು. ಜ.15ರ ನಂತರ ಕ್ರಮೇಣ ದರ ಕುಸಿತಗೊಂಡಿದ್ದು, ಖರೀದಿದಾರರು ಬತ್ತ ಖರೀದಿಗೆ ಬರುತ್ತಿಲ್ಲ. ಹೀಗಾಗಿ ನಮ್ಮ ಜಮೀನು ಮತ್ತು ಮನೆ ಮುಂದೆ ರಾಶಿಗಟ್ಟಲೆ ಬತ್ತ ಸಂಗ್ರಹಿಸಿ ಹಗಲು ರಾತ್ರಿ ಕಾಯುವ ಪರಿಸ್ಥಿತಿ ಬಂದಿದೆ. ರಸಗೊಬ್ಬರ, ಕ್ರಿಮಿ ಕೀಟನಾಶಕ ಅಂಗಡಿಯವರು ಹಾಗೂ ಕೂಲಿಕಾರರಿಗೆ ನೀಡಲು ಹಣವಿಲ್ಲದಂತಾಗಿದೆ. ಇನ್ನೆರಡು ತಿಂಗಳಲ್ಲಿ ಬೇಸಿಗೆ ಬೆಳೆ ಬರುತ್ತಿದೆ. ಆದರೆ ಮುಂಗಾರು ಬತ್ತವೇ ಈವರೆಗೂ ಮಾರಾಟವಾಗಿಲ್ಲ' ಎನ್ನುತ್ತಾರೆ ರೈತ ಸಂಗಣ್ಣ ನೀರಲಕೇರಿ, ಸುಭಾಷ್ ನೀರಲಕೇರಿ, ಬಸವರಾಜ ಕಟಿಗೇರ, ಬಸನಗೌಡ.
ಒತ್ತಾಯ: ನಾರಾಯಣಪುರ ಬಲದಂಡೆ ಹಾಗೂ ರಾಂಪೂರ ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಅಧಿಕ ಬತ್ತ ಬೆಳೆದಿದ್ದಾರೆ. ರೈತರ ಹೋರಾಟಕ್ಕೆ ಮಣಿದ ಸರ್ಕಾರ ಜಿಲ್ಲೆಯ ರಾಯಚೂರು, ಸಿಂಧನೂರು ಹಾಗೂ ಮಾನವಿಯಲ್ಲಿ ಬತ್ತ ಖರೀದಿ ಕೇಂದ್ರ ಆರಂಭಿಸಿ ಲಿಂಗಸ್ಗೂರು ಮತ್ತು ದೇವದುರ್ಗವನ್ನು ಕಡೆಗಣಿಸಿದೆ. ಬೆಲೆ ಕುಸಿತದಿಂದ ಖರೀದಿದಾರರಿಲ್ಲದೆ ಬತ್ತದ ರಾಶಿ ಹಾಕಿ ಹಗಲು ರಾತ್ರಿ ರೈತರು ಕಾಯುವಂತಾಗಿದೆ.
ರೈತರು ಹೋರಾಟ ಮಾಡಿದಾಗ ಮಾತ್ರ ಖರೀದಿ ಕೇಂದ್ರ ಆರಂಭಿಸಿಸುವ ಸರ್ಕಾರ ರೈತಪರ ಕಾಳಜಿ ತೋರುತ್ತಿಲ್ಲ. ಕೂಡಲೇ ಲಿಂಗಸ್ಗೂರು ಮತ್ತು ದೇವದುರ್ಗದಲ್ಲಿ ಬತ್ತ ಖರೀದಿ ಕೇಂದ್ರ ಪ್ರಾರಂಭಿಸಿ ಪ್ರೋತ್ಸಾಹಧನ ಸೇರಿ 2,000 ಖರೀದಿಸಬೇಕು. ಇಲ್ಲದಿದ್ದರೆ ರೈತರು ನಷ್ಟ ಅನುಭವಿಸಿ ದಿವಾಳಿಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಮ ಗುಡಿಹಾಳ ಒತ್ತಾಯಿಸಿದ್ದಾರೆ.