ಸಿಂಗಾಪುರ ಮದ್ಯಸಾರ ಘಟಕ ವಿರುದ್ಧ ಮೊಕದ್ದಮೆ ದಾಖಲು
ಸಿಂಧನೂರು: ತುಂಗಭದ್ರಾ ನದಿ ನೀರು ಅಕ್ರಮವಾಗಿ ಬಳಸಿಕೊಂಡ ಹಿನ್ನೆಲೆಯಲ್ಲಿ ತಾಲೂಕಿನ ಸಿಂಗಾಪುರ ಡಿಸ್ಟಿಲರಿ ಫ್ಯಾಕ್ಟರಿ ವಿರುದ್ಧ ನೀರಾವರಿ ಇಲಾಖೆಯ ಕಾರಟಗಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎ.ಬಿ. ಚಿಕ್ಕೊಪ್ಪ ಅವರು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಅದರ ನೀರು ಬಳಸಿಕೊಳ್ಳದಂತೆ ಫ್ಯಾಕ್ಟರಿಯ ಪಂಪ್ಸೆಟ್ ಕೊಠಡಿಯನ್ನು ಕಾರಟಗಿ ಉಪವಿಭಾಗದ ಕಿರಿಯ ಎಂಜಿನಿಯರ್ ಶಿವಮೂರ್ತಿ ಅವರು ಫೆ.26ರಂದು ಸೀಜ್ ಮಾಡಿ, ತಾವು ಪರವಾನಗಿ ನೀಡುವವರೆಗೆ ನೀರು ಪಡೆದುಕೊಳ್ಳದಂತೆ ಸೂಚಿಸಿದ್ದರು.
ಮತ್ತೆ ಅಕ್ರಮವಾಗಿ ನೀರು ಬಳಕೆ: ಆದರೆ ಫ್ಯಾಕ್ಟರಿಯ ಅಧಿಕಾರಿಗಳು ಫೆ.28ರಂದು ರಾತ್ರೋರಾತ್ರಿ ಮೊಹರ್ ಸೀಜನ್ನು ಕಿತ್ತು ಹಾಕಿ ನೀರು ಪಡೆದುಕೊಳ್ಳುತ್ತಿರುವುದನ್ನು ಗಮನಿಸಿದ ನದಿ ಪಾತ್ರದ ಗ್ರಾಮಗಳ ರೈತರು ನೀರಾವರಿ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಎ.ಬಿ. ಚಿಕ್ಕೊಪ್ಪ ಅವರು ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ಶಶಿಕಾಂತ, ಅಸಿಸ್ಟಂಟ್ ಜನರಲ್ ಮ್ಯಾನೇಜರ್ ರಾಮಚಂದ್ರಪ್ಪ, ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ರಾಬರ್ಟ್ ಫಿಂಟೋ, ಸಹಾಯಕ ಅಧಿಕಾರಿಗಳಾದ ಸತ್ಯಮೂರ್ತಿ, ಪ್ರಸಾದ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಸಿಂಗಾಪುರ ಬಸನಗೌಡ ಸೇರಿದಂತೆ ಮತ್ತಿತರರ ರೈತರು ಇದ್ದರು.
ನದಿಯಲ್ಲಿ ನೀರು ಇರುವವರೆಗೆ 10 ಲಕ್ಷ ಲೀಟರ್ ನೀರು ಉಪಯೋಗಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಫ್ಯಾಕ್ಟರಿಯವರು ನಿಯಮವನ್ನು ಉಲ್ಲಂಘಿಸಿ ವರ್ಷಪೂರ್ತಿ ಸುಮಾರು 1200 ಎಕರೆಗೆ ಆಗುವಷ್ಟು ನೀರನ್ನು ಬಳಸಿಕೊಳ್ಳುತ್ತಿರುವುದರಿಂದ ನದಿಯ ಕೆಳಭಾಗದ ಮುಕ್ಕುಂದಾ, ಹುಡಾ, ಸಿಂಗಾಪುರ, ದಢೇಸುಗೂರು, ಕೆಂಗಲ್, ವಳಬಳ್ಳಾರಿ, ಹೆಡಗಿನಾಳ, ಚಿಂತಮಾನದೊಡ್ಡಿ ಮತ್ತಿತರ ಗ್ರಾಮಗಳಿಗೆ ಕುಡಿಯುವುದಕ್ಕೆ ಹಾಗೂ ವ್ಯವಸಾಯಕ್ಕೆ ನೀರಿನ ಕೊರತೆ ಉಂಟಾಗುತ್ತಿರುವುದರಿಂದ ರೈತರು ಇದನ್ನು ವಿರೋಧಿಸಿದ್ದರು.