ಬತ್ತದ ಹುಲ್ಲು ಸಂಗ್ರಹದಲ್ಲಿ ನಿರತರಾದ ರೈತರು
ಮುದಗಲ್:ಕಳೆದ ಸಾಲಿನಲ್ಲಿ ರೈತರಿಗೆ ಮೇವಿನ ಕೊರತೆ ಉಂಟಾಗಿದ್ದು, ಜಾನುವಾರುಗಳನ್ನು ಸಾಕಲು ರೈತರು ಸಂಕಷ್ಟ ಪಡುವಂತಾಗಿದ್ದರಿಂದ ಈ ಬಾರಿಗೆ ರೈತರು ಬತ್ತದ ಹುಲ್ಲಿಗೆ ಈಗಿನಿಂದಲೇ ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ಬತ್ತದ ಹುಲ್ಲಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಈ ಭಾಗದ ರೈತರು ದೂರದ ಸಿಂಧನೂರ, ಗಂಗಾವತಿ, ಮಾನ್ವಿ, ಸುರಪೂರ ಸೇರಿದಂತೆ ನೀರಾವರಿ ಪ್ರದೇಶಗಳಲ್ಲಿ ತೆರಳಿ ಬತ್ತದ ಹುಲ್ಲು ಖರೀದಿಸಿ ತರುತ್ತಿದ್ದಾರೆ. ಕಳೆದ ಸಾಲಿನಲ್ಲಿಯೂ ಮಳೆ ಅಭಾವ ಉಂಟಾಗಿದ್ದರಿಂದ ಬೆಳೆಗಳು ಸರಿಯಾಗಿ ಬಾರದೆ ಮೇವಿನ ಕೊರತೆ ಉಂಟಾಗಿತ್ತು. ಈ ಬಾರಿ ಮುಂಗಾರಿಗೆ ಉತ್ತಮ ಮಳೆ ಸುರಿದಿತ್ತು. ಆದರೆ ಹಿಂಗಾರಿಗೆ ಮಳೆ ಅಭಾವ ಉಂಟಾಗಿದ್ದರಿಂದ ಎಲ್ಲಿಯೂ ಸಮರ್ಪಕವಾಗಿ ಹುಲ್ಲು ಬೆಳೆದಿಲ್ಲ. ವರ್ಷ ಪೂರ್ತಿ ಮೇವಿನ ತೊಂದರೆ ಎದುರಿಸಿರುವ ರೈತರು ಮುಂದಿನ ದಿನಮಾನದಲ್ಲಿ ಮೇವಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಈಗಿನಿಂದಲೇ ಬತ್ತದ ಪ್ರದೇಶಗಳಿಗೆ ಹೋಗಿ ಬತ್ತದ ಹುಲ್ಲು ಖರೀದಿಯಲ್ಲಿ ತಲ್ಲೀನರಾಗಿದ್ದಾರೆ. ಕಳೆದ ವರ್ಷ ಆದ ಪರಿಸ್ಥಿತಿ ಈ ವರ್ಷ ಬಾರದಿರಲಿ ಎನ್ನುವ ಕಾರಣಕ್ಕೆ ರೈತರು ಬೇರೆ ಬೇರೆ ಕಡೆಗೆ ಹೋಗಿ ಜಾನುವಾರುಗಳಿಗೆ ಬತ್ತದ ಹುಲ್ಲು ಖರೀದಿಸಲು ಮುಂದಾಗಿದ್ದಾರೆ. ರೈತರು ಟ್ರ್ಯಾಕ್ಟರ್ ಒಂದಕ್ಕೆ 6ರಿಂದ 10 ಸಾವಿರ ನೀಡಿ ಮೇವು ತರುತ್ತಿದ್ದಾರೆ.