ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುಚ್ಚಿದ ತೊಗರಿ ಖರೀದಿ ಕೇಂದ್ರ: ಪ್ರತಿಭಟನೆ

Mainashree
Updated On : 4 Mar 2014, 10:46 am

ಕ.ಪ್ರ. ವಾರ್ತೆ  ರಾಯಚೂರು ಮಾ.3
ಇಲ್ಲಿನ ಎಪಿಎಂಸಿ ಆವರಣದಲ್ಲಿ ಸರ್ಕಾರ ಕಳೆದ ತಿಂಗಳು ಆರಂಭಿಸಿದ್ದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕೇಂದ್ರ ದಿಢೀರ್ ಮುಚ್ಚಿದ್ದನ್ನು ಖಂಡಿಸಿ ನಗರದಲ್ಲಿ ಸೋಮವಾರ ರೈತರು ತೊಗರಿ ಬೆಳೆಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರಕ್ಕೆ ಸೋಮವಾರ ಬೆಳಗ್ಗೆ 16ಕ್ಕೂ ಹೆಚ್ಚಿನ ರೈತರು ಟ್ರಾಕ್ಟರ್‌ಗಳಲ್ಲಿ ತೊಗರಿ ಬೆಳೆಯನ್ನು ಮಾರಾಟಕ್ಕೆಂದು ತಂದಿದ್ದು, ಈ ವೇಳೆ ಖರೀದಿ ಕೇಂದ್ರ ಮುಚ್ಚಿದ್ದನ್ನು ಕಂಡು ಆಕ್ರೋಶಗೊಂಡು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಗಿಳಿದು ಕೂಡಲೇ ತೊಗರಿ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿದರು.
ಅವ್ಯವಸ್ಥೆ: ಕಳೆದೊಂದು ತಿಂಗಳ ಹಿಂದಷ್ಟೇ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಿದ್ದು, ಒಂದೇ ತೂಕದ ಯಂತ್ರ ಹಾಗೂ ಸ್ವಚ್ಛಗೊಳಿಸುವ ಸಾಮಗ್ರಿಯಿದ್ದುದರಿಂದ ಖರೀದಿ ಪ್ರಕ್ರಿಯೆ ನಿಧಾನವಾಗಿತ್ತು. ಅದರಿಂದ ತೊಗರಿ ಮಾರಾಟ ಮಾಡಲು ಅನೇಕ ರೈತರಿಗೆ ಅವಕಾಶ ದೊರೆತಿಲ್ಲ. ಇಂಥ ಅವ್ಯವಸ್ಥೆಯಿಂದಾಗಿ ಮಾರಾಟಕ್ಕೆ ವಿಳಂಬವಾಗಿದೆ ಎಂದು ದೂರಿದರು.
ರಜೆಗೊಂದು ನೆಪ: ಸರ್ಕಾರದ ತೊಗರಿ ಖರೀದಿ ಕೇಂದ್ರದಲ್ಲಿ ಕಳೆದ ನಾಲೈದು ದಿನಗಳಿಂದ ತೊಗರಿ ಖರೀದಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಕಳೆದ ಬುಧವಾರ ಹಾಗೂ ಗುರುವಾರ ಶಿವರಾತ್ರಿ ಹಬ್ಬದ ನೆಪದಲ್ಲಿ ಖರೀದಿ ಕೇಂದ್ರ ಮುಚ್ಚಲಾಗಿತ್ತು. ಶನಿವಾರ ಅಮಾವಾಸ್ಯೆ ಎಂದು ಖರೀದಿ ಕೈಗೊಳ್ಳಲಿಲ್ಲ. ಸೋಮವಾರ ಖರೀದಿ ನಡೆಯುತ್ತದೆಂಬ ವಿಶ್ವಾಸದೊಂದಿಗೆ ಆಗಮಿಸಿದ್ದ ತಮಗೆ ಕೇಂದ್ರ ಏಕಾಏಕಿ ಬಂದ್ ಮಾಡಿ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿದರು.
ಕೂಡಲೇ ಖರೀದಿ ಕೇಂದ್ರ ಪುನಾರಂಭಿಸಬೇಕು. ಸಮರ್ಪಕವಾಗಿ ಸರದಿಯಂತೆ ತೊಗರಿ ಖರೀದಿಸಬೇಕು. ಖರೀದಿ ಕೇಂದ್ರದಲ್ಲಿ ಮತ್ತೊಂದು ತೂಕದ ಯಂತ್ರ ಸ್ಥಾಪಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಅವರು ಒಂದು ಗಂಟೆಯಲ್ಲಿ ಖರೀದಿ ಪುನಾರಂಭಿಸಲಾಗುತ್ತದೆಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ತೊಗರಿ ಬೆಳೆಗಾರರಾದ ಶ್ರೀನಿವಾಸ್, ಶರಣಪ್ಪ ಹೆಗ್ಗಡದಿನ್ನಿ, ಮಂಚಾಲಪ್ಪ, ವೆಂಕಟರೆಡ್ಡಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement