ಸ್ವಂತ ಖರ್ಚಿನಲ್ಲಿ ಮೂಲ ಸೌಕರ್ಯ: ಹಾಜಿ ಮಸ್ತಾನ್
ಸಿಂಧನೂರು: ತಮ್ಮ ಸ್ವಂತ ಖರ್ಚಿನಲ್ಲಿ ನಗರದ ಲಯನ್ಸ್ ಪಾರ್ಕ್, ತಮ್ಮ ನಿವಾಸದ ಪಕ್ಕದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಮೂಲ ಸೌಕರ್ಯಗಳನ್ನು ನಿರ್ಮಿಸುವುದಾಗಿ ನಗರದ 6ನೇ ವಾರ್ಡ್‌ನ ಸದಸ್ಯ ಹಾಜಿ ಮಸ್ತಾನ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ನಗರದ ಲಯನ್ಸ್ ಪಾರ್ಕ್‌ನಲ್ಲಿ ಮೂತ್ರಾಲಯ, ಸ್ನಾನಗೃಹ, ಕುಡಿವ ನೀರಿನ ಸೌಲಭ್ಯ ಹಾಗೂ ತಮ್ಮ ನಿವಾಸದ ಬಳಿ ಪುರುಷರ ಶೌಚಾಲಯ ನಿರ್ಮಾಸಲಾಗುವುದು ಎಂದು ತಿಳಿಸಿದ್ದಾರೆ.
ತಹಸೀಲ್ದಾರ್ ಕಾರ್ಯಾಲಯ ಬಿಟ್ಟರೆ ಅಶೋಕ ಭವನ ತಲುಪುವವರೆಗೆ ಪುರುಷರ ಮೂತ್ರಾಲಯಗಳಿಲ್ಲ. ಹೀಗಾಗಿ ಸಾರ್ವಜನಿಕರು ತೊಂದರೆ ಪಡುವಂತಾಗಿದೆ. ಲಯನ್ಸ್ ಪಾರ್ಕ್ ಬಳಿ ಟ್ಯಾಕ್ಸಿಗಳು ನಿಲ್ಲುವುದರಿಂದ ಅಲ್ಲಿನ ಚಾಲಕರಿಗೆ ಯಾವುದೇ ಸೌಲಭ್ಯಗಳಿಲ್ಲದಂತಾಗಿವೆ. ಇದನ್ನು ಗಮನಿಸಿ ಮೂಲ ಸೌಕರ್ಯ ಕಲ್ಪಿಸುವ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದರು.
ಮಹಿಳಾ ಶೌಚಾಲಯ ಸ್ವಚ್ಛತೆ, ವಾರ್ಡ್‌ನ ನಿವಾಸಿಗಳಿಗೆ ಸಮರ್ಪಕ ಕುಡಿವ ನೀರು, ನೈರ್ಮಲ್ಯ, ವಾರ್ಡ್‌ನಲ್ಲಿ ನನೆಗುದಿಗೆ ಬಿದ್ದಿರುವ ಸರ್ಕಾರದ ಯೋಜನೆಗಳ ಸಮರ್ಪಕ ಜಾರಿಗೆ ಪ್ರಾಮಾಣಿಕ ಕೆಲಸ ಮಾಡುವುದಾಗಿ ಹಾಜಿ ಮಸ್ತಾನ್ ಹೇಳಿದರು.