ಹದಗೆಟ್ಟ ದಿದ್ದಗಿ- ಜವಳಗೇರಿ ಸಂಪರ್ಕ ರಸ್ತೆ
ಸಿಂಧನೂರು: ತಾಲೂಕಿನ ಜವಳಗೇರಿ- ದಿದ್ದಗಿ ಸಂಪರ್ಕ ಕಲ್ಪಿಸುವ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಸ್ತೆಗೆ ಮರಂ ಹಾಕಿ ಹಾಗೆಯೇ ಬಿಟ್ಟಿರುವುದರಿಂದ ಮಳೆನೀರಿಗೆ ಮಣ್ಣು ಕೊಚ್ಚಿ ಹೋಗಿ ಅಲ್ಲಲ್ಲಿ ದೊಡ್ಡ ದೊಡ್ಡ ಕಂದಕಗಳು ಉಂಟಾಗಿವೆ.
ಮಳೆಗಾಲದಲ್ಲಿ ಹಳ್ಳದ ನೀರು ಹರಿಯಲು ನಿರ್ಮಿಸಿದ ಸಿಮೆಂಟ್ ಗೋಡೆ ಮತ್ತು ಕಾಂಕ್ರಿಟ್ ನೆಲಹಾಸು ಕಿತ್ತಿಹೋಗಿದೆ. ದಿದ್ದಿಗಿ- ಜವಳಗೇರಿ 7 ಕಿ.ಮೀ ರಸ್ತೆ ಹದಗೆಟ್ಟ ಕಾರಣ ಇಲ್ಲಿನ ಗ್ರಾಮಸ್ಥರು 12 ಕಿಮೀ.ಗೂ ದೂರವಿರುವ ಪೋತ್ನಾಳ ಮೂಲಕ ನಗರಕ್ಕೆ ಪ್ರಯಾಣಿಸುತ್ತಾರೆ.
ಡಾಂಬರೀಕರಣಕ್ಕೆ ಒತ್ತಾಯ: ದಿನವೂ ಗ್ರಾಮದಿಂದ ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ನಗರಕ್ಕೆ ತೆರಳುತ್ತಾರೆ. ರಸ್ತೆ ಅವ್ಯವಸ್ಥೆಯಿಂದ ತೀವ್ರ ತೊಂದರೆಯಾಗಿದ್ದು, ಸುಗಮ ಸಂಚಾರಕ್ಕೆ ಡಾಂಬರ್ ರಸ್ತೆ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ತೊಂದರೆ: ಅಷ್ಟೇನು ಸಾರಿಗೆ ಸಂಪರ್ಕದ ಅನುಕೂಲವಿಲ್ಲದ ಕಾರಣ ಮಳೆಗಾಲದಲ್ಲಿ ತೀವ್ರ ತೊಂದರೆಯಾಗುತ್ತದೆ. ಇನ್ನು ಖಾಸಗಿ ವಾಹನಗಳಲ್ಲಿ ಸಂಚರಿಸಬೇಕೆಂದರೆ ರಸ್ತೆಯೂ ಇಲ್ಲ, ಅತ್ತ ಬಸ್ಸೂ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು. ಜವಳಗೇರಿಯ ಹೊರ ಭಾಗದಲ್ಲಿ ದಿದ್ದಿಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಗೆ ಅಲ್ಲಲ್ಲಿ ಕಂಕರ್‌ಗಳನ್ನು ಹಾಕಲಾಗಿದೆ. ಆದರೆ ಮರಂ ಹಾಕಿ ಮೆಟಲಿಂಗ್ ಮಾಡುವ ಕಾರ್ಯ ವಿಳಂಬವಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.