ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಆಗ್ರಹ
ಸಿಂಧನೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರಾತಂಕವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವರಿಗೆ ತಹಸೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿತು.
ಜವಳಗೇರಾ ಹೋಬಳಿ ವ್ಯಾಪ್ತಿಯ ಸುಲ್ತಾನಪುರ, ಜಂಗಮರಹಟ್ಟಿ, ಶ್ರೀನಿವಾಸಕ್ಯಾಂಪ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಮದ್ಯವ್ಯಸನಿಗಳಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ದಿನವೂ ಒಂದಿಲ್ಲೊಂದು ಸಣ್ಣಪುಟ್ಟ ಜಗಳ ಸಾಮಾನ್ಯವಾಗಿವೆ. ಮಹಿಳೆಯರೂ ಕುಡಿತದ ಕಡೆ ವಾಲುತ್ತಿದ್ದು, ಕುಟುಂಬ ಕಲಹಗಳು ಹೆಚ್ಚುತ್ತಿವೆ ಎಂದು ತಾಲೂಕು ಘಟಕ ಅಧ್ಯಕ್ಷ ಶರಣಪ್ಪ ಮಳ್ಳಿ ತಹಸೀಲ್ದಾರ್ ಅವರ ಗಮನ ಸೆಳೆದರು.
ಕಾಂಗ್ರೆಸ್ ಸರ್ಕಾರ ಜನರ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಹೇಳುತ್ತಲೇ ಕುಡುಕರ ರಾಜ್ಯವನ್ನಾಗಿ ಮಾಡಲು ಹೊರಟಿದೆ. ಮದ್ಯವ್ಯಸನದಿಂದಾಗಿ ಸಾವಿರಾರು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದಕ್ಕೆ ಸರ್ಕಾರವೇ ಕಾರಣ ಎಂದು ಅವರು ಟೀಕಿಸಿದರು.
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಸಂಘಟನೆಯಿಂದ ಬಾರಕೋಲು, ಕಸಬರಿಗೆ ಚಳವಳಿಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಬಸವರಾಜ ಹಂಚಿನಾಳ, ಶಿವಮೂರ್ತೆಪ್ಪ, ಬಸಪ್ಪ ನಾಯಕ, ಮಾನಪ್ಪ ಊಟಿ, ದ್ಯಾವಣ್ಣ ಹರಿಜನ, ಮರಿಯಪ್ಪ, ಅಯ್ಯಪ್ಪ ಮಾನೇಗಾರ, ನಿಂಗಪ್ಪ ಸಂಗಟಿ ಇನ್ನಿತರರು ಇದ್ದರು.