ಗಣೇಕಲ್ ಜಲಾಶಯ ಭರ್ತಿಗೆ ಕ್ರಮ, ನಿಷೇಧಾಜ್ಞೆ
ರಾಯಚೂರು: ನಗರಕ್ಕೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಗಣೇಕಲ್ ಜಲಾಶಯ ಭರ್ತಿಗೆ ಜಿಲ್ಲಾಡಳಿತ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶ ಹೊರಡಿಸಿ, ಸಿಂಧನೂರು, ಮಾನವಿ ಹಾಗೂ ದೇವದುರ್ಗ ತಾಲೂಕುಗಳಲ್ಲಿನ ವಿವಿಧ ವಿತರಣಾ ಕಾಲುವೆಗಳ ಮೂಲಕ ಗಣೇಕಲ್ ಜಲಾಶಯಕ್ಕೆ ನೀರು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಿದ್ದು, ನೀರು ಸಂಗ್ರಹಣೆ ಕಾರ್ಯಕ್ಕೆ ರೈತರಿಂದ ಅಡೆತಡೆಯಾಗದಂತೆ ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ ಎಡದಂಡೆ ಕಾಲುವೆಯ ಮೈಲ್ 47ರಿಂದ 104ರವರೆಗೆ ವಿತರಣಾ ಕಾಲುವೆ ಪ್ರದೇಶ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮಾ.4ರ ರಾತ್ರಿಯಿಂದ ಮಾ.14ರ ರಾತ್ರಿ 10ರವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಮೈಲ್ 47ರಿಂದ 104ರವರೆಗಿನ ವಿತರಣೆ ಕಾಲುವೆಗಳಾದ 36, 54, 65, 76ರ ಬಳಿ ಅಗತ್ಯ ಸಂಖ್ಯೆಯ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಮತ್ತು ವಿತರಣೆ ಕಾಲುವೆಗಳಾದ 49, 55, 66, 69, 71, 73, 78, 79, 82, 84, 85 ಮತ್ತು 89ರಲ್ಲಿ ಪ್ರತಿ ವಿತರಣೆ ಮಾರ್ಗದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ನೀರು ಗಣೇಕಲ್ ಜಲಾಶಯಕ್ಕೆ ನೀರು ಹರಿಸಿಕೊಳ್ಳುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ.