ದಲಿತರ ಮೇಲೆ ದೌರ್ಜನ್ಯ; 11ರಂದು ಜಾಥಾ ಎಚ್ಚರಿಕೆ
ರಾಯಚೂರು: ದೇವದುರ್ಗ ತಾಲೂಕಿನ ಜಾಗೀರಜಾಡಲದಿನ್ನಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸಿದ 27 ಜನ ಆರೋಪಿಗಳನ್ನು ವಾರದೊಳಗೆ ಬಂಧಿಸಬೇಕು. ತಪ್ಪಿದಲ್ಲಿ ಜಾಗೀರಜಾಡಲದಿನ್ನಿ ಗ್ರಾಮದಿಂದ ರಾಯಚೂರಿನವರೆಗೆ ಮಾ.11ರಿಂದ ಜಾಥಾ ಆಯೋಜಿಸಲಾಗುತ್ತದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ರಾಹಂ ಹೊನ್ನಟಗಿ ಎಚ್ಚರಿಸಿದರು.
ನಗರದಲ್ಲಿ ಬುಧವಾರ ಸಂಘಟನೆಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.26ರಂದು ಜಾಗೀರಜಾಡಲದಿನ್ನಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಹಳೆಯ ದ್ವೇಷದಿಂದ ಈ ಘಟನೆ ನಡೆದಿದೆ. ಗ್ರಾಮದಲ್ಲಿ ದಲಿತರ ಮೇಲೆ ನಿರಂತರ ಶೋಷಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಗ್ರಾಮದಲ್ಲಿ ರಂಗಪ್ಪ ಎಂಬ ದಲಿತನೊಬ್ಬ ಖರೀದಿಸಿದ್ದ ಜಾಗಕ್ಕೆ ಸಂಬಂಧಿಸಿ ತಗಾದೆ ತೆಗೆದು ದಲಿತ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ನಂತರ ಈ ವಿಚಾರವಾಗಿ ಮೇಲಿಂದ ಮೇಲೆ ದಲಿತರ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ದೂರಿದರು.
ಪ್ರಕರಣ ದಾಖಲಿಸದಂತೆ ದಲಿತರಿಗೆ ಎಚ್ಚರ: ಫೆ.28ರಂದು ಪುನಾ ದಲಿತರ ಕಾಲೋನಿಗೆ ನುಗ್ಗಿ ದಲಿತರ ಮೇಲೆ ಹಲ್ಲೆ ಮಾಡಿ ಗುಡಿಸಲಿಗೆ ಬೆಂಕಿಯಿರಿಸಿದ್ದಾರೆ. ಈ ಘಟನೆಯಲ್ಲಿ ಅನೇಕ ದಲಿತರು ಗಾಯಗೊಂಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸದಂತೆ ದಲಿತರಿಗೆ ಎಚ್ಚರಿಸಿದ ಪ್ರಸಂಗವೂ ಗ್ರಾಮದಲ್ಲಿ ನಡೆದಿದೆ ಎಂದು ಆರೋಪಿಸಿದರು.
ಸದ್ಯ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿಯಿದ್ದು, ದಲಿತರು ಗ್ರಾಮದಲ್ಲಿ ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ. ದೇವದುರ್ಗ ಪೊಲೀಸರು ಪ್ರಕರಣ ದಾಖಲಿಸಿದ ನಂತರ ಆರೋಪಿಗಳ ಬಂಧನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ರಾಜಕೀಯ ಒತ್ತಡ ಪೊಲೀಸರ ಮೇಲಿದೆ. ಶಾಸಕ ವೆಂಕಟೇಶ ನಾಯಕ ಅವರ ಬೆಂಬಲಿಗ ರಮೇಶ್ ನಾಯಕ ದೌರ್ಜನ್ಯ ಪ್ರಕರಣದಲ್ಲಿ ಶಾಮೀಲಾಗಿದ್ದು, ಈ ಹಿನ್ನೆಲೆಯಲ್ಲಿ ಬಂಧನ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು.
ಭೇಟಿಯಿಲ್ಲ: ಶಾಸಕ ವೆಂಕಟೇಶ ನಾಯಕ ಅವರು ಘಟನೆಯ ನಂತರವೂ ಇದುವರೆಗೆ ಗ್ರಾಮಕ್ಕೆ ಭೇಟಿ ನೀಡಿಲ್ಲ. ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡಲು ಕ್ರಮ ಕೈಗೊಂಡಿಲ್ಲ ಎಂದ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಅವರ ಸೂಚನೆ ಹೊರತಾಗಿಯೂ ಆರೋಪಿಗಳ ಬಂಧನಕ್ಕೆ ಕೆಳಹಂತದ ಅಧಿಕಾರಿಗಳು ಮುಂದಾಗಿಲ್ಲ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಕೂಡಲೇ ದೌರ್ಜನ್ಯ ಪ್ರಕರಣದಲ್ಲಿ ಶಾಮೀಲಾಗಿರುವ 27 ಜನ ಆರೋಪಿಗಳನ್ನು ವಾರದೊಳಗೆ ಬಂಧಿಸಬೇಕು. ತಪ್ಪಿದಲ್ಲಿ ಮಾ.11ರಂದು ಜಾಗೀರಜಾಡಲದಿನ್ನಿ ಗ್ರಾಮದಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿ ವರೆಗೆ ಜಾಥಾ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಗ್ರಾಮದಲ್ಲಿ ಸೌಹಾರ್ದದ ವಾತಾವರಣ ನಿರ್ಮಾಣದ ಮೂಲಕ ದಲಿತರಿಗೆ ಜೀವನ ನಡೆಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶಾಂತಿಸಭೆ ಕರೆದು ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು. ಹೇಮರಾಜ ಅಸ್ಕಿಹಾಳ, ರಂಗಪ್ಪ, ಶರಣಪ್ಪ ಬಲ್ಲಟಗಿ, ತಿಮ್ಮಪ್ಪ, ಶಿವಪ್ಪ ಬಲ್ಲಿದ್ ಇದ್ದರು.