ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಲೋಕಸಭೆ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ

Mainashree
Updated On : 6 Mar 2014, 11:29 am

 ವಿಶೇಷ ವರದಿ
ಕ.ಪ್ರ. ವಾರ್ತೆ  ರಾಯಚೂರು  ಮಾ.5
ವಿವಿಧ ರಾಜಕೀಯ ಪಕ್ಷಗಳು ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟ, ಹೆಸರು ಅಂತಿಮಗೊಳಿಸುವುದರಲ್ಲಿ ತೊಡಗಿವೆ. ಇತ್ತ ಜಿಲ್ಲಾಡಳಿತ ಸಹ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ 8 ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡ ರಾಯಚೂರು ಲೋಕಸಭೆ ಕ್ಷೇತ್ರದ ಚುನಾವಣೆಗೆ ಭರದ ಸಿದ್ಧತೆಗೆ ತೊಡಗಿದೆ.
  ಕೇಂದ್ರ ಚುನಾವಣೆ ಆಯೋಗವು ಈಗಾಗಲೇ ಮುಂಬರುವ ಲೋಕಸಭೆಯ ದಿನಾಂಕ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಹ ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಂಡಿದೆ.
  ರಾಯಚೂರು ಜಿಲ್ಲೆಯ ರಾಯಚೂರು ನಗರ ಕ್ಷೇತ್ರ, ರಾಯಚೂರು ಗ್ರಾಮೀಣ, ಮಾನವಿ, ಲಿಂಗಸ್ಗೂರು ಹಾಗೂ ದೇವದುರ್ಗ ವಿಧಾನಸಭೆ ಕ್ಷೇತ್ರಗಳು ಮತ್ತು ಯಾದಗಿರಿ ಜಿಲ್ಲೆಯ ಯಾದಗಿರಿ, ಸುರಪುರ, ಶಹಾಪುರ ವಿಧಾನಸಭೆ ಕ್ಷೇತ್ರಗಳನ್ನು ರಾಯಚೂರು ಲೋಕಸಭೆ ಕ್ಷೇತ್ರ ಒಳಗೊಂಡಿದೆ.
ಮತಗಟ್ಟೆಗಳು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನಕ್ಕಾಗಿ ರಾಯಚೂರು ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 1878 ಮತಗಟ್ಟೆಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ಸದ್ಯಕ್ಕೆ ನಿರ್ಧರಿಸಿದೆ. ಈ ಪೈಕಿ 753 ಮತಗಟ್ಟೆಗಳು ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಾಪುರ ಮತ್ತು ಸುರಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರಲಿವೆ.
  ಹಾಗೆಯೇ ರಾಯಚೂರು ಜಿಲ್ಲೆಯ ವ್ಯಾಪ್ತಿಯ ರಾಯಚೂರು ನಗರ, ರಾಯಚೂರು ಗ್ರಾಮೀಣ, ಮಾನವಿ, ಲಿಂಗಸ್ಗೂರು, ದೇವದುರ್ಗ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 1125 ಮತಗಟ್ಟೆಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ಉದ್ದೇಶಿಸಿದೆ.
  ಲೋಕಸಭೆ ಚುನಾವಣೆಗೆ ಸದ್ಯದ ಮಾಹಿತಿಯಂತೆ ಯಾದಗಿರಿ ಜಿಲ್ಲೆಯ ಯಾದಗಿರಿಯಲ್ಲಿ 236 ಮತಗಟ್ಟೆಗಳು, ಶಹಾಪುರ- 230, ಸುರಪುರದಲ್ಲಿ 287 ಮತಗಟ್ಟೆ ಸ್ಥಾಪಿಸಲುದ್ದೇಶಿಸಲಾಗಿದೆ. ಇನ್ನು ರಾಯಚೂರು ಜಿಲ್ಲೆಯ ವ್ಯಾಪ್ತಿಯ ರಾಯಚೂರು ನಗರ ಕ್ಷೇತ್ರದಲ್ಲಿ 194 ಮತಗಟ್ಟೆಗಳು, ರಾಯಚೂರು ಗ್ರಾಮೀಣ- 226, ಮಾನವಿ- 235, ಲಿಂಗಸ್ಗೂರು- 237 ಮತ್ತು ದೇವದುರ್ಗದಲ್ಲಿ 233 ಮತಗಟ್ಟೆಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ.
ಮತದಾರರ ಸಂಖ್ಯೆ: ರಾಯಚೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಂತರ ಒಟ್ಟು 16,10,427 ಮತದಾರರಿದ್ದಾರೆ. ಇದರಲ್ಲಿ 8,10,026 ಪುರುಷ ಹಾಗೂ 8,00,121 ಮಹಿಳಾ ಮತದಾರರಿದ್ದಾರೆ. ಕ್ಷೇತ್ರದ ವ್ಯಾಪ್ತಿಯ ರಾಯಚೂರು ನಗರ ಕ್ಷೇತ್ರದಲ್ಲಿ 97,228 ಪುರುಷ, 94,747 ಮಹಿಳಾ ಮತದಾರರಿದ್ದಾರೆ. ಅದೇ ರೀತಿ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 99,517 ಪುರುಷ, 1,01,489 ಮಹಿಳಾ ಮತದಾರರಿದ್ದಾರೆ. ಮಾನವಿಯಲ್ಲಿ 1,01,580 ಪುರುಷ, 1,02,392 ಮಹಿಳೆಯರು, ದೇವದುರ್ಗದಲ್ಲಿ 94,975 ಪುರುಷ, 94,067 ಮಹಿಳಾ, ಲಿಂಗಸ್ಗೂರಲ್ಲಿ 1,03,737 ಪುರುಷ, 1,00,275 ಮಹಿಳಾ ಮತದಾರರಿದ್ದಾರೆ.
  ಇನ್ನು ಯಾದಗಿರಿ ಜಿಲ್ಲೆಯ ಯಾದಗಿರಿ ಕ್ಷೇತ್ರದಲ್ಲಿ 98,902 ಪುರುಷ, 98,835 ಮಹಿಳಾ ಮತದಾರರಿದ್ದರೆ, ಶಹಾಪುರದಲ್ಲಿ 98,125 ಪುರುಷ, 96,252 ಮಹಿಳಾ ಮತದಾರರು, ಸುರಪುರದಲ್ಲಿ 1,15,962 ಪುರುಷ ಹಾಗೂ 1,12,064 ಮಹಿಳಾ ಮತದಾರರಿದ್ದಾರೆ.
ಸಭೆಗಳು: ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ಈಗಾಗಲೇ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪೂರ್ವ ಸಿದ್ಧತೆ ಬಗ್ಗೆ ಚುನಾವಣೆ ವೇಳೆ ಸಮರ್ಪಕ ಕಾರ್ಯನಿರ್ವಹಣೆಗೆ ಪೂರಕ ಸಲಹೆ, ಸೂಚನೆ ನೀಡುವ ಮೂಲಕ ಜಿಲ್ಲಾಡಳಿತ ಚುನಾವಣೆ ಎದುರಿಸಲು ಸನ್ನದ್ಧವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement