ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ರಾಯಚೂರು: ರಾಯಚೂರು ಗ್ರಾಮೀಣ ಕ್ಷೇತ್ರದ ವಿವಿಧೆಡೆ ಸಿಸಿ ರಸ್ತೆ, ಸಮುದಾಯ ಭವನ, ಕುಡಿಯುವ ನೀರು ಸೇರಿ ಅಭಿವೃದ್ಧಿ ಕಾಮಗಾರಿಗಳಿಗೆ ಇತ್ತೀಚೆಗೆ ಶಾಸಕ ತಿಪ್ಪರಾಜು ಹವಾಲ್ದಾರ್ ಚಾಲನೆ ನೀಡಿದರು. ತಾಲೂಕಿನ ಯರಗೇರಾ ಗ್ರಾಮದಲ್ಲಿ 50 ಲಕ್ಷ ವೆಚ್ಚದ ವಾಲ್ಮೀಕಿ ಭವನ ನಿರ್ಮಾಣಕ್ಕೆ ಭೂಮಿ ಪೂಜೆ, ಜಂಬಲದಿನ್ನಿ ಗ್ರಾಮದಲ್ಲಿ ಸವಾರೆಮ್ಮ ದೇವಸ್ಥಾನ ಹತ್ತಿರ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಅಡಿಗಲ್ಲು, ಗುಂಜಳ್ಳಿ ಗ್ರಾಮದ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ, ಗಿಲ್ಲೆಸೂಗೂರು ಗ್ರಾಮದ ನರಸಪ್ಪ ತಾತನವರ ಗುಡಿ ಹತ್ತಿರ ಸಾಂಸ್ಕೃತಿಕ ಭವನ, ಗ್ರಾಮದ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ತುಂಗಭದ್ರಾ ಕ್ಯಾಂಪ್ನಲ್ಲಿ ಸಿಸಿ ರಸ್ತೆ ನಿರ್ಮಾಣ, ಗಾಣದಾಳ ಗ್ರಾಮದಲ್ಲಿ ಶಾಲಾ ಕೋಣೆ ನಿರ್ಮಾಣಕ್ಕೆ ಭೂಮಿ ಪೂಜೆ, ತಲಮಾರಿ ಗ್ರಾಮದಲ್ಲಿ ಸಾಕ್ಷರತಾ ಕಟ್ಟಡದ ಉದ್ಘಾಟನೆ, ಗಂಗವಾರ ಗ್ರಾಮದಲ್ಲಿ ಸಿಸಿ ರಸ್ತೆ, ಮಿರ್ಜಾಪುರ ಗ್ರಾಮದಲ್ಲಿ ಸಿಸಿ ರಸ್ತೆ, ಮಿಡಗಲದಿನ್ನಿ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಹತ್ತಿರ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.