ಸಿಸಿ ರಸ್ತೆ ಕಾಮಗಾರಿ ಚುರುಕಿಗೆ ಕರವೇ ಒತ್ತಾಯ
ರಾಯಚೂರು: ನಗರದ ಚಂದ್ರಮೌಳೇಶ್ವರ ವೃತ್ತದಿಂದ ಪೂರ್ಣಿಮಾ ಚಿತ್ರಮಂದಿರದವರೆಗೆ ಕೈಗೆತ್ತಿಕೊಂಡಿರುವ ಸಿಸಿ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಒತ್ತಾಯಿಸಿದೆ.
ಈ ಕುರಿತು ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ, ನಗರದ ಚಂದ್ರಮೌಳೇಶ್ವರ ವೃತ್ತದಿಂದ ಪೂರ್ಣಿಮಾ ಚಿತ್ರಮಂದಿರದವರೆಗೆ ಕೈಗೊಳ್ಳುತ್ತಿರುವ ಸಿಸಿ ರಸ್ತೆ ಕಾಮಗಾರಿಯು ನಿಧಾನಗತಿಯಲ್ಲಿದೆ. ಕಳೆದ 8 ತಿಂಗಳಿನಿಂದ ಕಾಮಗಾರಿ ಜಾರಿಯಲ್ಲಿದ್ದು, ಶೀಘ್ರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಆರೋಪಿಸಿದರು.
ಕಾಮಗಾರಿಯನ್ನು ವಹಿಸಿಕೊಂಡಿರುವ ಗುತ್ತಿಗೆದಾರರ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲರಿಗೂ ತೊಂದರೆಯಾಗುತ್ತಿದೆ. ಗಂಜ್ ಪ್ರದೇಶ, ಹೈದರಾಬಾದ್ ರಸ್ತೆ ಸೇರಿ ವಿವಿಧ ಗ್ರಾಮಗಳಿಗೆ ತೆರಳಲು ಹತ್ತಿರದ ಮಾರ್ಗ ಇದಾಗಿದ್ದು, ದಿನವೂ ಸಾವಿರಾರು ಸಂಖ್ಯೆಯ ವಾಹನಗಳು ಸಂಚರಿಸುತ್ತಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಟೀಕಿಸಿದರು.
ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿರುವ ಮಾರ್ಗದ ಇಕ್ಕೆಲಗಳಲ್ಲಿನ ವರ್ತಕರಿಗೂ ಕಾಮಗಾರಿಯ ವಿಳಂಬದಿಂದ ನಷ್ಟವಾಗುತ್ತಿದೆ. ಈ ಮಾರ್ಗದ ಮೂಲಕ ಸಂಚರಿಸುವ ಎಲ್ಲರೂ ಹಿಡಿಶಾಪ ಹಾಕುತ್ತಲೇ ಸಾಗುವಂತಾಗಿದ್ದು, ಜನರ ತಾಳ್ಮೆ ಪರೀಕ್ಷಿಸುವ ಕಾರ್ಯ ಗುತ್ತಿಗೆದಾರರು ಹಾಗೂ ನಗರಸಭೆ ಆಡಳಿತ ಮಾಡುತ್ತಿದೆ ಎಂದು ಎಚ್ಚರಿಸಿದರು.
ಕೂಡಲೇ ಮುಂದಿನ 30 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಸಂಘಟನೆಯು ಉಗ್ರ ಹೋರಾಟಕ್ಕಿಳಿಯಲಿದೆ ಎಂದು ಕರವೇ ಸಂಘಟನೆ ಎಚ್ಚರಿಸಿದೆ. ಜಿಲ್ಲಾಧ್ಯಕ್ಷ ವಿನೋದರೆಡ್ಡಿ, ಸತೀಶ್ ಅಗರವಾಲ್, ಭೀಮಣ್ಣ, ಬಾಬಾ, ವೆಂಕಟೇಶ್ ಮಡಿವಾಳ್, ಮಸ್ತಾನ್ ಎಂಡಿ ಇದ್ದರು.