ಸುದ್ದಿ ಸಂಕ್ಷೇಪ
ಎಸ್ಟಿ ವಿದ್ಯಾರ್ಥಿಗಳ ಪ್ರವಾಸ ಆರಂಭ
ರಾಯಚೂರು: ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಜಿಲ್ಲಾ ವಾರ್ತಾಇಲಾಖೆಯಿಂದ ಶೈಕ್ಷಣಿಕ ಪ್ರವಾಸ ಆಯೋಜಿಸಿದ್ದು, ಬುಧವಾರ ವಿದ್ಯಾರ್ಥಿಗಳ ಪ್ರವಾಸ ಕೈಗೊಂಡರು. ನಗರದ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದ 50 ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಶೈಕ್ಷಣಿಕ ಪ್ರವಾಸಕ್ಕಾಗಿ ಕರೆದೊಯ್ಯಲಾಗಿದ್ದು, ಪ್ರತಿ ತಾಲೂಕಿನಿಂದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಶೈಕ್ಷಣಿಕ ಪ್ರವಾಸ ಆರಂಭಿಸಲಾಗಿದೆ ಎಂದು ವಾರ್ತಾಇಲಾಖೆ ತಿಳಿಸಿದೆ. ಪ್ರಸಿದ್ಧ ಪ್ರವಾಸಿ ತಾಣಗಳಾದ ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್, ಕೂಡಲಸಂಗಮ ಹಾಗೂ ಗುಲ್ಬರ್ಗ ವೀಕ್ಷಣೆಗೆ ಆಯೋಜಿಸಲಾಗಿದೆ. ಪ್ರವಾಸದಲ್ಲಿ ವಾರ್ತಾಇಲಾಖೆಯ ಸಿನಿ ಚಾಲಕರಾದ ಉಮಾಶಂಕರ ಚಿನಮ್ಮಳ್ಳಿ, ಪ್ರಥಮ ದರ್ಜೆ ಸಹಾಯಕ ವಿ.ಸಿ. ಗುರುರಾಜ್ ಅವರಲ್ಲದೆ ಪ್ರತಿ ತಾಲೂಕಿನ ಹಾಸ್ಟೆಲ್‌ಗಳ ಮೇಲ್ವಿಚಾರಕರು ಪಾಲ್ಗೊಂಡಿದ್ದಾರೆಂದು ಜಿಲ್ಲಾ ವಾರ್ತಾ ಇಲಾಖೆ ತಿಳಿಸಿದೆ.
ವಚನ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಸಲಹೆ
ರಾಯಚೂರು: ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ವಚನಸ್ಪರ್ಧೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ನ್ಯಾಯವಾದಿ ಬಸವರಾಜಪ್ಪ ಮಾತನಾಡಿ, ಜಾತಿ ರಹಿತ ಸಮಾಜವನ್ನು ಶರಣರು ನಿರ್ಮಿಸಿದ್ದು, ಸಮಾಜದಲ್ಲಿ ಮನುಷ್ಯ ಜಾತಿ ಒಂದೇ. ಎಲ್ಲರ ಮನದಲ್ಲಿ ದೇವರಿದ್ದಾನೆ. ಅರಿವೇ ಗುರು ಎಂಬ ಸತ್ಯವನ್ನು ಅರಿಯುವ ನಿಟ್ಟಿನಲ್ಲಿ ಮಕ್ಕಳು ವಚನಗಳ ಅಧ್ಯಯನಕ್ಕೆ ತೊಡಗುವಂತೆ ಸಲಹೆ ನೀಡಿದರು. ಮುಖ್ಯ ಅತಿಥಿ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಬೋರರಡ್ಡಿ, ವಚನಗಳ ಅರ್ಥವನ್ನು ತಿಳಿದು ಅದರಂತೆ ನಡೆದಲ್ಲಿ ಜೀವನ ಸುಗಮವಾಗಿ ಸಾಗುವುದೆಂದರು. ರಾಮಸ್ವಾಮಿ ನುಲಿ ಮಾತನಾಡಿದರು. ವಚನ ಗಾಯನ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಮುತ್ತಮ್ಮ ಮೊದಲ ಬಹುಮಾನ ಹಾಗೂ ಚೈತ್ರಾ ಎರಡನೇ ಮತ್ತು ಸುಕನ್ಯಾ ಮೂರನೇ ಬಹುಮಾನ ಪಡೆದರು. ಈ ಸಂದರ್ಭ ವಚನ ಕಮ್ಮಟ ಪರೀಕ್ಷೆಯಲ್ಲಿ ಭಾಗವಹಿಸಿದ್ದ 40 ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ವಿದ್ಯುತ್ ವ್ಯತ್ಯಯ
ರಾಯಚೂರು: ತಾಲೂಕಿನ ಮಟಮಾರಿಯಲ್ಲಿ ನೂತನ 110ಕೆವಿ ವಿದ್ಯುತ್ ಮಾರ್ಗ ಕಾಮಗಾರಿ ನಿರ್ವಹಣೆ ಹಿನ್ನೆಲೆ ಮಾ.7 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ. ಮಟಮಾರಿಯ 110ಕೆವಿ ಕೆವಿ ಮಾರ್ಗದಲ್ಲಿ ಕಾಮಗಾರಿ ನಿರ್ವಹಣೆ ಪ್ರಯುಕ್ತ ಮಾ.7ರಂದು ಬೆಳಗ್ಗೆ 8ರಿಂದ ಸಂಜೆ 6ರವರೆಗೆ 33 ಕೆವಿ ವಿದ್ಯುತ್ ಕೇಂದ್ರ ಮಟಮಾರಿ ಮತ್ತು ಗಿಲ್ಲೆಸೂಗೂರು ಮಾರ್ಗದಲ್ಲಿನ ಮಟಮಾರಿ ಹಾಗೂ ಗಿಲ್ಲೆಸೂಗೂರು ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ಪ್ರಕಟಣೆ ತಿಳಿಸಿದೆ.