ನವಲಕಲ್: ಇಂದು ಜಾತ್ರಾ ಮಹೋತ್ಸವ
ರಾಯಚೂರು: ಮಾನವಿ ತಾಲೂಕಿನ ನವಲಕಲ್ ಗ್ರಾಮದ ಮಹಾಸಂಸ್ಥಾನ ಬ್ರಹನ್ಮಠದಲ್ಲಿ ಲಿಂ.ಸೋಮಶೇಖರ ಶಿವಾಚಾರ್ಯ ಅವರ 17ನೇ ಜಾತ್ರಾ ಮಹೋತ್ಸವ ಮಾ.8 ರಂದು ನಡೆಯಲಿದೆ.
ಮಠದ ಅಭಿನವ ಸೋಮನಾಥ ಶಿವಾಚಾರ್ಯರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಮಾ.8 ರಂದು ಬೆಳಗ್ಗೆ ನೀಲಗಲ್ ಬ್ರಹನ್ಮಠದ ಪಂಚಾಕ್ಷರಿ ಶಿವಾಚಾರ್ಯರ ಸಾನಿಧ್ಯದಲ್ಲಿ ಶ್ರೀಗಳವರ ಕೃರ್ತಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ನಡೆಯಲಿದೆ.
ನಂತರ ಸಂಜೆ 4.30ಕ್ಕೆ ಪಲ್ಲಕ್ಕಿ ಸೇವೆ, ನಂದಿಕೋಲು ಮೆರವಣಿಗೆ, ಪುರವಂತಿಗೆ ನಡೆಯಲಿದ್ದು, ಸಂಜೆ 5.30ಕ್ಕೆ ರಥೋತ್ಸವ ಆಯೋಜಿಸಲಾಗಿದೆ. ಸಂಜೆ 7ಕ್ಕೆ ಶಿವಾನುಭವಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ರಾಯಚೂರಿನ ಕಿಲ್ಲೆ ಬ್ರಹನ್ಮಠದ ಶ್ರೀಶಾಂತಮಲ್ಲ ಶ್ರೀ ವಹಿಸುವರು. ಸಾನಿಧ್ಯವನ್ನು ಗಬ್ಬೂರಿನ ಬೂದಿಬಸವೇಶ್ವರ ಶಿವಾಚಾರ್ಯರು ವಹಿಸಲಿದ್ದಾರೆ.
ವಿವಿಧ ಮಠಗಳ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ವಿವಿಧ ಸಾಧಕರನ್ನು ಈ ವೇಳೆ ಶ್ರೀಮಠದಿಂದ ಸನ್ಮಾನಿಸಲಾಗುತ್ತದೆ.
ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ನವಲಕಲ್ ಬ್ರಹನ್ಮಠದ ಪ್ರಕಟಣೆ ಕೋರಿದೆ.