ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆಗೆ ನಿಗಾ: ಜಿಲ್ಲಾಧಿಕಾರಿ
ರಾಯಚೂರು: ಲೋಕಸಭೆ ಚುನಾವಣೆಯನ್ನು ಶಿಸ್ತುಬದ್ಧ ಮತ್ತು ಸುಗಮವಾಗಿ ನಿರ್ವಹಿಸಲು ಪೂರಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ನೀತಿ ಸಂಹಿತೆಯ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದರು.
ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಲೋಕಸಭೆ ಚುನಾವಣೆ ಹಿನ್ನೆಲೆಯ ಅಧಿಕಾರಿಗಳ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀತಿ ಸಂಹಿತೆಯ ಕಟ್ಟುನಿಟ್ಟಿನಲ್ಲಿ ಪಾಲನೆಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕೆಂದು ಸೂಚಿಸಿದರು.
ಮುನ್ನೆಚ್ಚರಿಕೆ ವಹಿಸಿ: ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಚುನಾವಣೆ ಆಯೋಗ ಸೂಚಿಸಿದ್ದು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಪೊಲೀಸ್ ಅಧಿಕಾರಿಗಳು ರಾಜಕೀಯ ಸಮಾವೇಶ, ಸಭೆ ಸಮಾರಂಭಗಳಿಗೆ ಅವಕಾಶ ನೀಡುವ ವೇಳೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿದರು.
ಸಾಮಗ್ರಿ ಬಳಕೆಯ ಮೇಲೂ ನಿಗಾ: ಚುನಾವಣೆ ವೇಳೆ ಶಾಂತಿ ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಬಹುದಾದ ಯಾವುದೇ ಸಭೆ ಸಮಾರಂಭಗಳಿಗೆ ಅನುಮತಿ ನೀಡಬಾರದು. ಚುನಾವಣೆಯ ಪ್ರಚಾರ ಸಾಮಗ್ರಿ ಬಳಕೆಯ ಮೇಲೂ ನಿಗಾಯಿರಿಸಬೇಕು. ಖಾಸಗಿ ವ್ಯಕ್ತಿಗಳಿಗೆ ಸೇರಿದ ಆಸ್ತಿ ಮೇಲೆ ಪ್ರಚಾರ ಸಾಮಗ್ರಿ ಅಳವಡಿಸದಂತೆ ಗಮನವಿಡಬೇಕೆಂದು ಆದೇಶಿಸಿದರು.
ದೂರವಾಣಿ ಕರೆಯ ಮೂಲಕ ಯಾವುದೇ ರೀತಿಯ ವ್ಯವಹಾರ ನಡೆಸದೇ ಲಿಖಿತ ರೂಪದಲ್ಲಿಯೇ ಪರವಾನಗಿ ಪಡೆಯುವಂತೆ ರಾಜಕೀಯ ಪಕ್ಷಗಳಿಗೆ ಸೂಚಿಸಿ, ಶಿಸ್ತು ಕಾಪಾಡಲು ವಿಫಲರಾದರೆ ಅನುಮತಿ ರದ್ದುಗೊಳಿಸಬೇಕು. ಚುನಾವಣೆ ಪ್ರಚಾರದ ವೇಳೆ ವೈಯಕ್ತಿಕ ವಿಚಾರಗಳ ಪ್ರಸ್ತಾಪ ಮಾಡಲು ಅವಕಾಶವಿಲ್ಲ. ಈ ಕುರಿತು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ವಿಜಯ ಜೋತ್ಸ್ನಾ, ಪ್ರಭಾರಿ ಅಪರ ಜಿಲ್ಲಾಧಿಕಾರಿ ಉಮೇಶ್, ಸಹಾಯಕ ಆಯುಕ್ತ ಯೋಗೀಶ್, ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.