ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಭಾರಿ ಆಲಿಕಲ್ಲು ಮಳೆ, ಅನೇಕರಿಗೆ ಗಾಯ

Rashmi Kasaragodu
Updated On : 8 Mar 2014, 11:00 am

ಲಿಂಗಸ್ಗೂರು/ರಾಯಚೂರು: ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ವಿವಿಧ ಗ್ರಾಮಗಳು ಮತ್ತು ಮಾನವಿ ತಾಲೂಕಿನ ಸಿರವಾರ, ಚಾಗಭಾವಿ ಗಳಲ್ಲಿ ಶುಕ್ರವಾರ ಸಂಜೆ ಧಾರಾಕಾರ ಆಲಿಕಲ್ಲು ಮಳೆಯಾಗಿದೆ.
ಲಿಂಗಸ್ಗೂರು ತಾಲೂಕಿನ ಗುರುಗುಂಟಾ ಸುತ್ತಲಿನ ಪ್ರದೇಶದಲ್ಲಿ ಸುರಿದ ಆಲಿಕಲ್ಲು ಮಳೆಗೆ ವಿವಿಧ ಗ್ರಾಮಗಳ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದವರು ಮತ್ತು ದನ, ಕುರಿಗಾಹಿಗಳು ಆಲಿಕಲ್ಲು ಹೊಡೆತಕ್ಕೆ ಸಿಲುಕಿ ತೀವ್ರ ಗಾಯಗೊಂಡಿದ್ದು, ಅವರನ್ನು ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.
ಧರೆಗುಳಿದ ಮರಗಳು: ತಾಲೂಕಿನ ಗುರುಂಗುಟಾ, ಗೋನವಾಟ್ಲಾ, ಗೋನವಾಟ್ಲಾ ತಾಂಡಾ, ಗುಂತಗೋಳ, ಯರಡೋಣಾ, ಯರಗೋಡಿ, ಅಮರೇಶ್ವರ, ದೇವರಭೂಪುರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಸಂಜೆ 6ರ ವೇಳೆ ಆರಂಭಗೊಂಡ ಬಿರುಗಾಳಿಯಿಂದ ಕೂಡಿದ ಆಲಿಕಲ್ಲು ಮಳೆಯಿಂದಾಗಿ ಮರಗಳು ನೆಲಕ್ಕುರುಳಿವೆ.
ಅದೇ ರೀತಿ ಹೊಲಗಳಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದವರು ಹಾಗೂ ದನ, ಕುರಿಗಳನ್ನು ಮೇಯಿಸಲು ಕರೆದೊಯ್ದವರು ಆಲಿಕಲ್ಲಿನ ತೀವ್ರ ಹೊಡೆತಕ್ಕೆ ಸಿಲುಕಿ ಗಾಯಗೊಂಡಿದ್ದು, ಅವರನ್ನು ತಾಲೂಕು ಆಸ್ಪತ್ರೆಗೆ ಹಾಗೂ ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.
ಬೆಳೆ ಹಾನಿ: ಇನ್ನು ಧಾರ್ಮಿಕ ಪ್ರಸಿದ್ಧ ಕೇಂದ್ರ ಅಮರೇಶ್ವರದಲ್ಲಿಯೂ ಆಲಿಕಲ್ಲು ಮಳೆಗೆ ಸಿಲುಕಿ ಅನೇಕ ಮರಗಳು ಧರೆಗುರುಳಿದ್ದು, ಅಮರೇಶ್ವರ ದೇವಾಲಯವು ಆಲಿಕಲ್ಲುಗಳಿಂದ ಸುತ್ತುವರಿದಿದೆ. ದೊಡ್ಡ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದರಿಂದ ಪಪ್ಪಾಯಿ, ಬಿಳಿ ಜೋಳ, ಹತ್ತಿ, ಶೇಂಗಾ, ಕಡಲೆ ಮತ್ತಿತರೆ ಬೆಳೆಗಳು ಸಂಪೂರ್ಣ ಹಾನಿಯಾಗಿದೆ.
ಮಾನವಿ ವರದಿ: ಮಾನವಿ ತಾಲೂಕಿನ ಸಿರವಾರ, ಚಾಗಭಾವಿ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಆಲಿಕಲ್ಲಿನ ಭಾರಿ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಜೆ ಸುರಿದ ಧಾರಾಕಾರ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಹೊಲದಲ್ಲಿದ್ದವರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದರು. ಆದರೆ ರೈತರು ಬೆಳೆದ ಬತ್ತ ಮತ್ತಿತರೆ ಬೆಳೆಗಳು ಆಲಿಕಲ್ಲು ಹೊಡೆತಕ್ಕೆ ಸಿಲುಕಿ ನಾಶವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.



ಹಿಂದೆಂದೂ ಕಂಡರಿಯದ ಆಲಿಕಲ್ಲು ಮಳೆಯಾಗಿದ್ದು ಜಾನುವಾರು, ಕುರಿ- ಕೋಳಿಗಳು ಸಾವನ್ನಪ್ಪಿವೆ. ಅಲ್ಲದೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಕೂಡಲೇ ತಾಲೂಕು ಆಡಳಿತ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯ ಕೈಗೊಂಡು ರೈತರಿಗೆ ಪರಿಹಾರ ನೀಡಬೇಕು. ನಿರ್ಲಕ್ಷ್ಯ ತೋರಿದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.
 ಅಮರಣ್ಣ ಗುಡಿಹಾಳ, ರೈತ ಸಂಘದ ರಾಜ್ಯ ಕಾರ್ಯದರ್ಶಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement