ರಸ್ತೆ ಕಾಮಗಾರಿ ತಡೆಗೆ ಸಮಿತಿ ಒತ್ತಾಯ
ರಾಯಚೂರು: ನಗರದ ಹನುಮಾನ್ ಚಿತ್ರಮಂದಿರ ವೃತ್ತದಿಂದ ವಾಸವಿ ಚೌಕ್ವರೆಗೆ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ತಿಮ್ಮಾಪುರಪೇಟೆ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಸಂಘಟನೆಯು ನಗರಸಭೆಯಿಂದ ಹನುಮಾನ್ ಚಿತ್ರಮಂದಿರ ಸರ್ಕಲ್ನಿಂದ ವಾಸವಿ ವೃತ್ತದವರೆಗೆ ರಸ್ತೆ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಗೊತ್ತಾಗಿದ್ದು, ಈ ರಸ್ತೆಯ ಉದ್ದವು 100 ಮೀಟರ್ ಉದ್ದ, 60 ಅಡಿ ಅಗಲದ ರಸ್ತೆ ಇದಾಗಿದೆ. ರಸ್ತೆಗೆ 25 ಲಕ್ಷ ವೆಚ್ಚ ಮಾಡಲು ನಗರಸಭೆ ನಿರ್ಧರಿಸಿದೆ. ರಸ್ತೆ ಅಗಲೀಕರಣದ ವೇಳೆ ಕನ್ನಿಕಾ ಪರಮೇಶ್ವರಿ ಬಡಾವಣೆಯ ಕಡೆಗೆ ಅಗಲೀಕರಿಸುವ ಬದಲಿಗೆ ಕರ್ನಾಟಕ ಸಂಘದ ಕಡೆಗಿನ ರಸ್ತೆ ಅಗಲೀಕರಣಕ್ಕೆ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಒತ್ತುವರಿಗೆ ತೆರವಿಗೆ ಒತ್ತಾಯ: ಈಗಾಗಲೇ 15 ಅಡಿಯ ಕಟ್ ಕಾಲುವೆಯಿದ್ದು, ಆ ಕಾಲುವೆಯನ್ನು ಕನ್ನಿಕಾ ಪರಮೇಶ್ವರಿ ಬಡಾವಣೆಯವರು ಹಾಗೂ ಹನುಮಾನ್ ಚಿತ್ರ ಮಂದಿರದವರು ಒತ್ತುವರಿ ಮಾಡಿದ್ದು, ಈ ಬಗ್ಗೆ ಸಮಿತಿಯು ಅನೇಕ ಬಾರಿ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದೆ. ಒತ್ತುವರಿಯಾಗಿರುವ ಭಾಗವನ್ನು ತೆರವುಗೊಳಿಸಿದ ನಂತರವೇ ರಸ್ತೆ ಕಾಮಗಾರಿ ಕೈಗೊಳ್ಳಲು ಸಮಿತಿ ಒತ್ತಾಯಿಸಿದೆ.
ಸುಪ್ರೀಂಕೋರ್ಟಿನ ಆದೇಶದಂತೆ ಸಾರ್ವಜನಿಕ ಸ್ಥಳ ಉದ್ಯಾನವನದಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ. ಆದರೆ ನಗರದಲ್ಲಿ ದುದಿಬೆನ್ ಠಾಕರ್ಸಿ ಶಾಲೆಯು ಉದ್ಯಾನವನದಲ್ಲಿಯೇ ನಿರ್ಮಿಸಿದ್ದು, ಅದರ ತೆರವಿಗೆ ಆದೇಶವಿದ್ದರೂ ಜಿಲ್ಲಾಡಳಿತ ಮೌನ ವಹಿಸಿದೆ ಎಂದು ಟೀಕಿಸಿದೆ.