ಹಿಮಾಲಯ ದರುಶನ; ಜನ- ಜಾನುವಾರು ತತ್ತರ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮಾ.7
ಹಿಂದೆಂದೂ ಕಂಡರಿಯದ ದೊಡ್ಡ ಗಾತ್ರದ ಆಲಿಕಲ್ಲು ಸಹಿತ ಮಳೆ ಸುರಿದ ಪರಿಣಾಮ ಹಲವಾರು ಗ್ರಾಮ, ತಾಂಡಾ, ದೊಡ್ಡಿಗಳಲ್ಲಿ ಹಿಮಾಲಯದಂಥ ವಾತಾವರಣ ಶುಕ್ರವಾರ ಸಂಜೆ ಸೃಷ್ಟಿಯಾಗಿದೆ.
ತಾಲೂಕಿನ ಹಲವೆಡೆ ಬಿರುಗಾಳಿಯ ಜೊತೆಗೆ ಸುರಿದ ದೊಡ್ಡ ಗಾತ್ರದ ಆಲಿಕಲ್ಲು ಮಳೆಯಿಂದ ಅಮರೇಶ್ವರ ದೇವಸ್ಥಾನ, ಲಿಂಗ ಆವೃತವಾಗಿದೆ. ಕ್ಷೇತ್ರದಾದ್ಯಂತ ಜನಆಲಿಕಲ್ಲುಗಳ ಹೊಡೆತಕ್ಕೆ ತೊಂದರೆಗೊಳಗಾಗಿದ್ದಾರೆ.
ಜಾನುವಾರು ಸಾವು: ದೇವರಭೂಪೂರ, ಗುಂತಗೋಳ, ಗೋನವಾಟ್ಲ, ಯರಗೋಡಿ, ಹಂಚಿನಾಳ, ಗೋನವಾಟ್ಲ ತಾಂಡಾ, ಮಲ್ಲಾಪೂರ ಸೇರಿದಂತೆ ಅನೇಕ ಹಳ್ಳಿ, ದೊಡ್ಡಿ, ತಾಂಡಾಗಳಲ್ಲಿ ಆಲಿಕಲ್ಲು ಮಳೆಯಿಂದ ಅನೇಕ ಗಿಡ-ಮರಗಳು ನೆಲಕ್ಕುರುಳಿವೆ. ಮನೆಯ ಸಿಮೆಂಟ್ ಶೀಟುಗಳು, ಪತ್ರಾಸ್ ಗಾಳಿಗೆ ಹಾರಿ ಹೋಗಿವೆ. ಅನೇಕ ವಾಹನಗಳ ಗಾಜುಗಳು ಚೂರಾಗಿವೆ. ಗೋನವಾಟ್ಲ ತಾಂಡಾದಲ್ಲಿ ಕುರಿ, ಮೇಕೆ, ಕೋಳಿಗಳು ಸಾವನ್ನಪ್ಪಿವೆ. ಅಮರೇಶ್ವರ ದೇವಸ್ಥಾನದಲ್ಲಿ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವೃದ್ಧೆಯನ್ನು ಜನರು ರಕ್ಷಿಸಿದ ವರದಿಯಾಗಿದೆ.
ಅಪಾರ ಹಾನಿ: ಗುಂತಗೋಳದ ಲಕ್ಷ್ಮೀನಾರಾಯಣರೆಡ್ಡಿಗೆ ಸೇರಿದ ಹೊಲದಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 500 ಚೀಲದಷ್ಟು ಬತ್ತ ಮಂಜುಗಡ್ಡೆ ಪಾಲಾಗಿದೆ. ಅಮರೇಶ್ವರದ ಚಂದ್ರಶೇಖರಪ್ಪ ಭೋಗಾಪುರ ಎಂಬುವರ ಪಪ್ಪಾಯಿ ತೋಟ ಹಾನಿಗೀಡಾಗಿದೆ. ಅಲ್ಲದೆ ವಿವಿಧ ಗ್ರಾಮಗಳಲ್ಲಿ ದಾಳಿಂಬೆ, ಶೇಂಗಾ, ಬತ್ತ, ಮೆಣಸಿನಕಾಯಿ ಸೇರಿದಂತೆ ಬೆಳೆಗಳು ಹಾನಿಗೀಡಾಗಿವೆ. ಹಂಚಿನಾಳದಲ್ಲಿ ಶೇಂಗಾ, ಜೋಳ, ಮೆಕ್ಕೆಜೋಳ, ಮೆಣಸಿನಕಾಯಿ ಗಿಡಗಳು ಮಳೆಗೆ ಆಹುತಿಯಾಗಿದ್ದು, ಭಾರಿ ನಷ್ಟ ಸಂಭವಿಸಿದೆ. ಇದೇ ಗ್ರಾಮದ ಲಕ್ಷ್ಮೀಬಾಯಿ ಸಾಬಣ್ಣ ಹಾಗೂ ಕೂಡ್ಲೆಪ್ಪ ಲಿಂಗಪ್ಪ ಎಂಬುವರು ಕುರಿ ಕಾಯಲು ಹೋದಾಗ ಆಲಿಕಲ್ಲು ಬಡಿದು ಗಾಯಗಳಾಗಿದ್ದು, ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.