5 ವರ್ಷದಲ್ಲಿ ಒಂದು ಬಾರಿಯೂ ಭೇಟಿ ನೀಡದ ಸಂಸದ ಫಕೀರಪ್ಪ
ಕ.ಪ್ರ. ವಾರ್ತೆ, ಮುದಗಲ್, ಮಾ.8
ಚುನಾಯಿತ ಜನಪ್ರತಿನಿಧಿಗಳಾದವರು ತಮ್ಮ ಕ್ಷೇತ್ರದ ಹಳ್ಳಿ, ಹೋಬಳಿಗಳಿಗೆ ಒಮ್ಮೆಯಾದರೂ, ಭೇಟಿ ನೀಡುವ ಮೂಲಕ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವುದು ವಾಡಿಕೆ.
ಆದರೆ ರಾಯಚೂರು ಸಂಸದ ಸಣ್ಣಫಕೀರಪ್ಪ ಮುದಗಲ್ ಹೋಬಳಿಗೆ ಅಧಿಕಾರ ಅವಧಿಯ 5 ವರ್ಷದಲ್ಲಿ ಒಮ್ಮೆಯೂ ಭೇಟಿ ನೀಡಲಿಲ್ಲ. ಈ ಭಾಗದ ಜನರಿಗೆ ಸಂಸದ ಸಣ್ಣಪಕೀರಪ್ಪನವರನ್ನು ನೋಡಲೂ ಸಾಧ್ಯವಾಗಲಿಲ್ಲ.
ಅವರನ್ನು ನೋಡಿದ್ದಾದರೆ ಪತ್ರಿಕೆಗಳ ಜಾಹಿರಾತಿನಲ್ಲಿ, ಚುನಾವಣೆ ವೇಳೆಯ ಕರಪತ್ರಗಳಲ್ಲಿ, ಅಲ್ಲೊಂದು ಇಲ್ಲೊಂದು ಸಂಸದರ ಅನುದಾನದಲ್ಲಿ ನಿರ್ಮಿಸಿದ ಬಸ್ ಸೇಟ್ಲರ್ನ ಭಾವಚಿತ್ರಗಳಲ್ಲಿ ಮಾತ್ರ ಎಂದು ಈ ಭಾಗದ ಜನರ ಮಾತು.
ಹಾಜರಾಗಲಿಲ್ಲ: 60 ಹಳ್ಳಿಗಳಿಗೆ ಕೇಂದ್ರ ಬಿಂದುವಾಗಿರುವ ಮುದಗಲ್ ಪಟ್ಟಣದಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಮಾಡಿದರೂ ಸಂಸದರು ಹಾಜರಾಗಲಿಲ್ಲ. ಈ ಭಾಗದ ಜನರ ಬೇಡಿಕೆಗಳೇನು ಎನ್ನುವುದನ್ನು ಆಲಿಸಲಿಲ್ಲ. ಚುನಾವಣೆಯಲ್ಲಿ ಮತ ಕೇಳಲು ಬರಲಿಲ್ಲ.
ಕೇಂದ್ರ ಸರ್ಕಾರದ ಯೋಜನೆಗಳಾದ ಅಟಲ್ ಬಿಹಾರಿ ವಾಜಿಪಾಯಿ ಗ್ರಾಮೀಣ ರಸ್ತೆ ಸುಧಾರಣೆ ಯೋಜನೆಗಳಲ್ಲಿ ಈ ಭಾಗದ ರಸ್ತೆಗಳ ದುರಸ್ತಿ ಕಾಣಲಿಲ್ಲ. ಸಂಸದರು ತಮ್ಮ ಕಾರ್ಯಕ್ಷೇತ್ರವನ್ನು ಕೇವಲ ರಾಯಚೂರು ಜಿಲ್ಲಾ ಕೇಂದ್ರಕ್ಕೆ ಸೀಮಿತಗೊಳಿಸಿಕೊಂಡರು.
ಅಭಿವೃದ್ಧಿ: ಇದರಿಂದಾಗಿ ಈ ಭಾಗದ ಜನರ ನೋವು ನಲಿವುಗಳನ್ನು ಕೇಳಲು ಅವರು ಸಮಯ ಪುರುಸೊತ್ತು ಮಾಡಿಕೊಳ್ಳಲಿಲ್ಲ. ಬಳ್ಳಾರಿ ಗಣಿ ಧಣಿಗಳ ಸಂಘ ಪರಿವಾರದಲ್ಲಿದ್ದ ಸಣ್ಣಪಕೀರಪ್ಪನವರು ಜಿಲ್ಲೆಯ ಸಂಸದರಾದರೆ ಏನಾದರು ಅಭಿವೃದ್ಧಿ ಸಾಧ್ಯವಾಗುತ್ತದೆ ಎನ್ನುವ ಮನೋಭಾವ ಹೊಂದಿದ್ದ ಮತದಾರರು ಅವರು ಮತ ಕೇಳಲು ಬರದಿದ್ದರು ಮತ ಹಾಕಿ ಗೆಲ್ಲಿಸಿ ಕಳಿಸಿದರು.
ಸಂಸದರ ಕಾರ್ಯಕ್ಷೇತ್ರ ದೊಡ್ಡದಾದರೂ, 5 ವರ್ಷದಲ್ಲಿ ಹೋಬಳಿಗೆ ಒಮ್ಮೆಯಾದರೂ ಭೇಟಿ ನೀಡಬಹುದಾಗಿತ್ತು. ಒಂದು ಕೆಲಸವನ್ನಾದರು ಮಾಡಿಸಬಹುದಾಗಿತ್ತು ಆದರೆ ಅವರ ನಿರ್ಲಕ್ಷ್ಯ ಇತ್ತ ಸುಳಿಯದಂತೆ ಮಾಡಿತು.
ನಿರ್ಲಕ್ಷ್ಯ: ಮುದಗಲ್ ಹೋಬಳಿ ಮೊದಲು ಕೊಪ್ಪಳ ಲೋಕಸಭೆ, ಕುಷ್ಠಗಿ ವಿಧಾನಸಭೆ ಕ್ಷೇತ್ರಕ್ಕೆ ಒಳಪಟ್ಟಿತ್ತು. ಕ್ಷೇತ್ರಗಳ ಮರುವಿಂಗಡನೆ ಆಗಿದ್ದರಿಂದ ಲಿಂಗಸ್ಗೂರು ವಿಧಾನಸಭೆ, ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಸೇರ್ಪಡೆಯಾಗಿದ್ದರಿಂದ ಮೊದಲು ಅಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದ ಮುದಗಲ್ ಹೋಬಳಿ ಈಗ ಇಲ್ಲಿಯೂ ನಿರ್ಲಕ್ಷಿಸಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಕೇಳಲು ಬರುವ ಅಭ್ಯರ್ಥಿಗಳಿಗೆ ಇಲ್ಲಿನ ಮತದಾರರು ಪ್ರಶ್ನೆಗಳನ್ನು ಕೇಳಲು ಸಿದ್ಧರಾಗಿದ್ದಾರೆ.
-ಪಂಪಯ್ಯ ಮಠ