ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ಭಾರತ ನಿರ್ಮಾಣ ಯಾತ್ರೆ

Lingaraj Badiger
Updated On : 9 Mar 2014, 10:40 am

ಸಿಂಧನೂರು: ಕೆಪಿಸಿಸಿ ಮತ್ತು ಕಾಂಗ್ರೆಸ್ ಜಿಲ್ಲಾ ಸಮಿತಿ ಕರೆ ಮೇರೆಗೆ ಮಾ. 9ರಂದು ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರತ ನಿರ್ಮಾಣ ಯಾತ್ರೆ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸಿಂಧನೂರಿನಿಂದ-ಗೊರೇಬಾಳವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಶಾದಿ ಮಹಲ್‌ನಲ್ಲಿ ಲೋಕಸಭೆ ಚುನಾವಣೆ ಕುರಿತು ಚರ್ಚಿಸಲು ಸಭೆ ಕರೆದಿದ್ದು, ಆ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್ ಪದಗ್ರಹಣ ಮಾಡಲಿದ್ದಾರೆ. ಸಭೆಯ ನಂತರ ಪಾದಯಾತ್ರೆ ಪ್ರಾರಂಭಿಸಲು ತೀರ್ಮಾನಿಸಿದ್ದು, ಪಾದಯಾತ್ರೆ ಸಮಯದಲ್ಲಿ ಜನಸಾಮಾನ್ಯರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ 5 ವರ್ಷ ಮತ್ತು ರಾಜ್ಯ ಸರ್ಕಾರದ 9 ತಿಂಗಳ ಸಾಧನೆ ಕುರಿತು ಮನವರಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಭಿವೃದ್ಧಿ ಯೋಜನೆ: ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿ ಯುವಜನರು ಸೇರಿದಂತೆ ಎಲ್ಲ ವರ್ಗದ ಹಾಗೂ ಎಲ್ಲ ಸಮುದಾಯದ ಜನರ ಅಭಿವೃದ್ಧಿಗಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೈಗೊಂಡಿರುವ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಸಾರ್ವಜನಿಕ ಮನವಿ ಮಾಡಲಾಗುವುದು ಎಂದು ವಿವರಿಸಿದರು.
ರಾಜ್ಯದಲ್ಲಿ ಮೋದಿ ಗಾಳಿಯೂ ಇಲ್ಲ, ಅಲೆಯೂ ಇಲ್ಲ. ಕೇವಲ ಮಾಧ್ಯಮಗಳ ಸೃಷ್ಠಿಯಾಗಿದೆ. ಶೇ. 85ರಷ್ಟು ಅನುದಾನ ಗುಜರಾತ್ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದಲೇ ಹೋಗಿದೆ ಎನ್ನುವುದನ್ನು ಯಾರೂ ಮರೆಯಬಾರದು ಎಂದು ಪ್ರತಿಕ್ರಿಯಿಸಿದರು.
ಸ್ಥಳೀಯ ಎಪಿಎಂಸಿ, ನಗರಸಭೆ, ನಗರ ಯೋಜನಾ ಪ್ರಾಧಿಕಾರಗಳಿಗೆ ಈಗ ಕೆಲವರನ್ನು ನಾಮನಿರ್ದೇಶನ ಮಾಡಲಾಗಿದೆ. ಇನ್ನು ಕೆಲವರ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿದೆ. ಇರುವ ಅವಕಾಶಗಳಲ್ಲಿ ಆದ್ಯತೆಯ ಮೇರೆಗೆ ಎಲ್ಲ ಕಾರ್ಯಕರ್ತರಿಗೂ ಒಂದಿಲ್ಲೊಂದು ರೀತಿಯಲ್ಲಿ ಗೌರವ ನೀಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಹೈಕಮಾಂಡ್ ನಿರ್ಧಾರ: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಅಮರೇಗೌಡ ಬಯ್ಯಾಪುರ, ಬಸವರಾಜಪ್ಪ ಹಿಟ್ನಾಳ ಮತ್ತು ಬಸನಗೌಡ ಬಾದರ್ಲಿ ಅವರ ಹೆಸರು ಶಿಫಾರಸ್ಸು ಮಾಡಲಾಗಿತ್ತು. ಇವರಲ್ಲದೆ ಬೇರೆಯವರಿಗೆ ಟಿಕೆಟ್ ನೀಡಿದರೂ ಹೈಕಮಾಂಡ್ ಆದೇಶದಂತೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭ ಮುಖಂಡರಾದ ಎನ್. ಶಿವನಾಗಪ್ಪ, ಎಂ. ಕಾಳಿಂಗಪ್ಪ ವಕೀಲ, ಜಿಪಂ ಸದಸ್ಯರಾದ ಶಿವನಗೌಡ ಎಲೆಕೂಡ್ಲಗಿ, ಚಂದೂಸಾಬ್ ಮುಳ್ಳೂರು, ತಾಪಂ ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ನಗರಸಭೆ ಅಧ್ಯಕ್ಷ ಜಾಫರ್ ಅಲಿ ಜಾಗೀರದಾರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್ ಅಹ್ಮದ್, ಕೊಪ್ಪಳ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರ್ತುಜಾ ಸೇರಿ ಅನೇಕರಿದ್ದರು.
ನಾಳೆ ಬಳಗಾನೂರಿನಿಂದ ಮಸ್ಕಿವರೆಗೆ: ಕೆಪಿಸಿಸಿ ಮತ್ತು ಜಿಲ್ಲಾ ಕಾಂಗ್ರೆಸ್ ಕರೆಯ ಮೇರೆಗೆ ಮಾ. 10ರಂದು ತಾಲೂಕಿನ ಬಳಗಾನೂರಿನಿಂದ ಮಸ್ಕಿವರೆಗೆ ಭಾರತ ನಿರ್ಮಾಣ ಯಾತ್ರಾ ನಡೆಯಲಿದೆ ಎಂದು ಕಾಂಗ್ರೆಸ್ ಮುಖಂಡರ ವಿರುಪಣ್ಣ ಗುತ್ತೇದಾರ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್, ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ಜಿ.ಪಂ. ಅಧ್ಯಕ್ಷೆ ಲಲಿತಮ್ಮ ಲಿಂಗರಾಜ್ ಪಾಟೀಲ್ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಅಂದು ಬೆಳಿಗ್ಗೆ 7ಗಂಟೆಗೆ ಮಾಜಿ ಸಂಸದ ದಿ. ಸಿದ್ದರಾಮೇಶ್ವರ ಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ನೆರವೇರಿಸಿ 7ನೇ ವಾರ್ಡ್ ಗ್ರಾ.ಪಂ.ಸದಸ್ಯ ನಾಗರಾಜ ಕೊಂಡರಡ್ಡಿ ಅವರ ನಿವಾಸದಿಂದ ಪಾದಯಾತ್ರೆ ಗ್ರಾಮದ ಎಲ್ಲಾ ವಾರ್ಡ್‌ಗಳಲ್ಲಿ ಸಂಚರಿಸಿ ಬಸವೇಶ್ವರ ನಗರದ ಮೂಲಕ ಹುಲ್ಲೂರು, ಉದ್ಬಾಳ, ಕ್ಯಾತ್ನಟ್ಟಿ, ಚಿಕ್ಕಕಡಬೂರು, ಸುಂಕನೂರು ಗ್ರಾಮಗಳಲ್ಲಿ ಸಂಚರಿಸಿ ಮಸ್ಕಿ ಪಟ್ಟಣಕ್ಕೆ ತಲುಪಲಿದೆ ಎಂದು ವಿವರಿಸಿದರು. ಕೇಂದ್ರ ಸರ್ಕಾರದ 5 ವರ್ಷದ ಸಾಧನೆ ಮತ್ತು ರಾಜ್ಯ ಸರ್ಕಾರದ 9 ತಿಂಗಳ ಸಾಧನೆ ಕುರಿತು ತಿಳಿಸಲಾಗುವುದು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಎಂ.ಡಿ. ಆಲಂಸಾಬ, ಗ್ರಾ.ಪಂ. ಉಪಾಧ್ಯಕ್ಷ ಟಿ. ಅಮರೇಶ ನಾಯಕ, ಸದಸ್ಯರಾದ ಎಸ್. ಮೌನೇಶಗೌಡ, ಹನುಮೇಶ ಹೂಗಾರ, ಇಸ್ಮಾಯಿಲ್  ಸಾಬ್ ಚೌದ್ರಿ, ಮುಖಂಡರಾದ ಗೋವಿಂದ ರಡ್ಡೆಪ್ಪಗೌಡ ಗದ್ದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement