ಸಮಾನತೆಯಿಲ್ಲದ ಸಮಾಜ ಅಧೋಗತಿಗೆ: ಗೌರಿ ಲಂಕೇಶ್
ರಾಯಚೂರು: ಧರ್ಮ ಮತ್ತಿತರೆ ವಿಚಾರಗಳ ಆಧಾರದಲ್ಲಿ ಪುರುಷರು ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ದೊರಕಿಸಿಕೊಡುತ್ತಿಲ್ಲ. ಅದರಿಂ ದಾಗಿ ಸಮಾಜ ಅಧೋಗತಿಯತ್ತ ಹೆಜ್ಜೆಯಿರಿಸುತ್ತಿದೆ ಎಂದು ಪತ್ರಕರ್ತೆ ಗೌರಿ ಲಂಕೇಶ್ ಎಚ್ಚರಿಸಿದರು.
ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲೋಹಿಯಾ ಪ್ರತಿಷ್ಠಾನ ಮತ್ತು ಕಾಲೇಜಿನ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಾಗರಿಕತೆಯ ಪ್ರಗತಿಗೆ ಮಹಿಳೆ ಕಾರಣ ಎಂಬ ಸತ್ಯವನ್ನು ಮರೆಮಾಚಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪರಿಪೂರ್ಣನಲ್ಲ: ನಾಗರಿಕತೆ ಮತ್ತು ಕೃಷಿಯ ಬೆಳವಣಿಗೆಯಲ್ಲಿ ಮಹಿಳೆಯದ್ದು ದೊಡ್ಡ ಪಾತ್ರವಿದೆ. ಆದರೆ ಪುರುಷರು ದೈಹಿಕ ಸಾಮರ್ಥ್ಯದ ಬಲದಿಂದಲೇ ಇಂದು ಸಮಾಜದಲ್ಲಿ ಮಹಿಳೆಗೆ ಸಮಾನತೆ ದೊರೆಯದಂತೆ ಮಾಡಿದ್ದಾರೆ. ಮಹಿಳೆಯಿಲ್ಲದೇ ಪುರುಷ ಎಂದಿಗೂ ಪರಿಪೂರ್ಣನಲ್ಲ ಎಂಬುದನ್ನು ಅರಿಯಬೇಕಿದೆ ಎಂದು ತಿಳಿ ಹೇಳಿದರು.
ಮುನ್ನಡೆ: ಮಹಿಳೆಯರಿಗೆ ಸಮಾಜದಲ್ಲಿ ಪುರುಷರಷ್ಟೇ ಸಮಾನತೆ ತಂದುಕೊಡದಿದ್ದರೆ ಸಮಾಜದ ನಾಶಕ್ಕೆ ದಾರಿಯಾಗಲಿದೆ ಎಂದರು. ಸಮಾರಂಭದಲ್ಲಿ ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಭೀಮನಗೌಡ ಇಟಗಿ, ಕಾಲೇಜಿನ ಉಪನ್ಯಾಸಕರಾದ ಪ್ರೊ.ಪಾಂಡುರಂಗ, ಡಾ.ದಸ್ತಗೀರ್ ಸಾಬ್ ದಿನ್ನಿ, ಸಾಹಿತಿ ವೀರಹನುಮಾನ್ ಸೇರಿ ಅನೇಕರಿದ್ದರು. ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಬೋಧಕ ವರ್ಗದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.