ಸಿಎಂ ಸಿದ್ದುಗೆ ಕಾಂಗ್ರೆಸ್ಸಿಗರೇ ಅಡ್ಡಗಾಲು
ರಾಯಚೂರು: ದೇಶದಲ್ಲಿ ನರೇಂದ್ರ ಮೋದಿ ಅಲೆಯಿಲ್ಲ. ಬಿಜೆಪಿ ದೇಶಪ್ರೇಮದ ಸಂಕೇತವಲ್ಲ. ದೇಶದ್ರೋಹಿ ಶಕ್ತಿಯಾಗಿದೆ. ಸಂಘ ಪರಿವಾರದವರು ಸಂವಿಧಾನ ವಿರೋಧಿಗಳು. ಪುರೋಹಿತಶಾಹಿ ಮತ್ತು ಕಾರ್ಪೋರೇಟ್ ವಲಯದವರು ಸೇರಿ ದೇಶದಲ್ಲಿ ಅಧಿಕಾರ ಹಿಡಿಯುವ ಷಡ್ಯಂತ್ರ ನಡೆಸುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಕಾಲೆಳೆಯುವವರ ಹಿಂಡೇ ಇದೆ ಎಂದು ಹಿರಿಯ ಚಿಂತಕ ಎ.ಕೆ. ಸುಬ್ಬಯ್ಯ ಟೀಕಿಸಿದರು.
ನಗರದಲ್ಲಿ ಅವರು ಭಾನುವಾರ ಲಂಕೇಶ್ ಬಳಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೇರಿ ಮತ್ತಿತರೆ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಪಿ. ಲಂಕೇಶ್ ಅವರ 79ನೇ ಜನ್ಮದಿನೋತ್ಸವದಲ್ಲಿ ಪ್ರಸ್ತುತ ರಾಜಕೀಯದ ಮಗ್ಗಲುಗಳು ಎಂಬ ವಿಚಾರ ಗೋಷ್ಠಿಯಲ್ಲಿ ವಿಷಯ ಮಂಡಿಸಿದರು.
ಅಧಿಕಾರ ಹಿಡಿಯುವ ಹುನ್ನಾರ: ಸಂವಿಧಾನ ಬದ್ಧ ಹಕ್ಕುಗಳನ್ನು ದೀನದಲಿತರಿಗೆ ದೊರಕಿಸಿಕೊಡುವುದು ಕೋಮುವಾದಿಗಳಿಗೆ ನುಂಗಲಾರದ ತುತ್ತಾಗಿದೆ. ನರೇಂದ್ರ ಮೋದಿ ಹೆಸರಿನಲ್ಲಿ ಅಧಿಕಾರ ಹಿಡಿಯುವ ಹುನ್ನಾರ ನಡೆದಿದೆ. ಗೋಧ್ರಾ ನರಮೇಧ, ಸುಳ್ಳು ಎನ್ ಕೌಂಟರ್ಗಳಿಗೆ ಕಾರಣರಾಗಿರುವ ಮೋದಿ ಅವರ ಅಲೆಯೆಂಬುದೇ ಬಹುದೊಡ್ಡ ಸುಳ್ಳು ಎಂದು ಅವರು ಲೇವಡಿ ಮಾಡಿದರು. ದೇಶದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವುದರಿಂದ ಬಡವರು, ದಲಿತರು, ಅಲ್ಪಸಂಖ್ಯಾತರು, ಕಾರ್ಮಿಕವರ್ಗಕ್ಕೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಬದಲಿಗೆ ಪುರೋಹಿತಶಾಹಿ ವರ್ಗ ಮತ್ತು ಕಾರ್ಪೋರೇಟ್ ಕಂಪನಿಗಳಿಗೆ ಬಹುದೊಡ್ಡ ಲಾಭವಾಗಲಿದೆ ಎಂದು ಎಚ್ಚರಿಸಿದರು.
ಅವಕಾಶವಿಲ್ಲ: ರಾಜ್ಯದ ಕಾಂಗ್ರೆಸ್ ಸರ್ಕಾರ ಚಲನಶೀಲವಾಗಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ನಿರೀಕ್ಷೆಗಳಿರಿಸಿಕೊಂಡಿದ್ದರೂ ಅವುಗಳ ಜಾರಿಗೆ ಮೂಲ ಕಾಂಗ್ರೆಸ್ಸಿಗರು ಅವಕಾಶ ನೀಡುತ್ತಿಲ್ಲ. ಜನಾಪೇಕ್ಷೆಯಂತೆ ಕಾರ್ಯನಿರ್ವಹಿಸುವುದು ಸಿಎಂ ಸಿದ್ದರಾಮಯ್ಯರಿಗೆ ಕಷ್ಟವಾಗುತ್ತಿದೆ ಎಂದು ಹೇಳಿದರು.
ಕೇಂದ್ರೀಯ ವಿವಿ ಗುಲ್ಬರ್ಗದ ಡಾ. ಶಿವಗಂಗಾ ರುಮ್ಮಾ ಮಾತನಾಡಿ, ದೇಶದಲ್ಲಿ ಮತದಾರರಿಗೆ ಚೌಕಟ್ಟುಗಳ ಮಧ್ಯೆಯಿರಿಸಿ ಮತದಾನ ಮಾಡಿ ಉತ್ತಮರನ್ನು ಆಯ್ಕೆ ಮಾಡುವಂತೆ ಹೇಳಲಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯದಂತೆ ಕಲ್ಯಾಣ ರಾಜ್ಯ ನಿರ್ಮಾಣ ಅಸಾಧ್ಯ ಎಂಬಂತಾಗಿದೆ ಎಂದರು.
ಬುದ್ಧಿಜೀವಿಗಳೆನಿಸಿಕೊಂಡವರು ಸ್ವಾರ್ಥ ಸಾಧನೆಗೆ ಸರ್ಕಾರದ ಗುಣಗಾನ ಮಾಡುವ ಕಾರ್ಯ ಮಾಡುತ್ತಿದ್ದಾರೆ. ತಮ್ಮ ಸ್ಥಾನ ಗಟ್ಟಿಗಳಿಸಿಕೊಳ್ಳಲು ಸರ್ಕಾರದ ಓಲೈಕೆಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿ ಯಾವ ಪಕ್ಷಗಳನ್ನೂ ಸಮರ್ಥಿಸಿಕೊಳ್ಳಲಾಗದು ಎಂದು ಹೇಳಿದರು.
ಮೂಲೆಸೇರಿದ ಸಮಾನತೆಯ ವಿಚಾರ: ಸಂವಿಧಾನ ಹೇಳಿರುವಂತೆ ಸಮಾನತೆಯ ಆಶಯ ಎಲ್ಲ ಕ್ಷೇತ್ರಗಳಲ್ಲಿ ದೊರೆತಿಲ್ಲ. ಕೇವಲ ರಾಜಕೀಯ, ಸಾಮಾಜಿಕ ಸಮಾನತೆಯ ಬಗ್ಗೆಯೇ ಚರ್ಚೆಗಳಾಗುತ್ತಿವೆ. ಆರ್ಥಿಕ ಸಮಾನತೆಯ ವಿಚಾರ ಮೂಲೆಸೇರಿದೆ. ಶ್ರೇಷ್ಠತೆ, ಕನಿಷ್ಠತೆ ಮಧ್ಯೆಯ ಅಮಾನತೆ ಹೋಗಲಾಡಿಸುವ ಕಾರ್ಯ ನಡೆದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಕೃಷಿ ನೀತಿ ರೂಪಿಸುವ ವೇಳೆ ರೈತರನ್ನು, ದಲಿತರ ಪರ ನೀತಿ ರೂಪಿಸುವ ವೇಳೆ ದಲಿತರನ್ನು ಹೊರಗಿಸುವ ಪರಿಪಾಠ ಬೆಳೆದಿದೆ. ಸರ್ಕಾರಗಳು ಕಾರ್ಪೋರೇಟ್ ವಲಯಗಳ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗುತ್ತಿದೆಂದು ಆತಂಕ ವ್ಯಕ್ತಪಡಿಸಿದರು.
ಗೊಂದಲದಲ್ಲಿ ಮತದಾರರು: ಕರ್ನಾಟಕ ರೈತಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಜನತೆಗೆ ಪರ್ಯಾಯ ರಾಜಕೀಯ ಶಕ್ತಿ ಕಾಣುತ್ತಿಲ್ಲ. ಕೋಮುವಾದಿ ಬಿಜೆಪಿ, ಭ್ರಷ್ಟಾಚಾರಿ ಕಾಂಗ್ರೆಸ್ ಪಕ್ಷದ ಮಧ್ಯೆ ಮತದಾರರು ಗೊಂದಲಕ್ಕೆ ಬಿದ್ದಿದ್ದಾರೆಂದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ನಡೆಸಿದ ಕೋಟ್ಯಂತರ ಭ್ರಷ್ಟಾಚಾರದ ಫಲವಾಗಿಯೇ ಸದ್ಯ ಕೋಮುವಾದಿ ಬಿಜೆಪಿ ಅಧಿಕಾರ ಹಿಡಿಯಲು ನೆರವಾಗುವಂತೆ ಮಾಡಿದೆ. ಮತದಾರರಿಗೆ ಈಗ ಯೋಚಿಸಿ ನಿರ್ಧಾರ ಕೈಗೊಳ್ಳುವ ಸಂಕ್ರಮಣ ಕಾಲ. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಲಭ್ಯವಿರುವ ಪಕ್ಷಗಳಲ್ಲಿಯೇ ಉತ್ತಮರನ್ನು ಆಯ್ಕೆ ಮಾಡುವ ಅನಿವಾರ್ಯತೆಯಲ್ಲಿ ಮತದಾರರಿದ್ದಾರೆಂದರು. ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರಗತಿಪರ ಚಿಂತಕ ವಿಠ್ಠಪ್ಪ ಗೋರಂಟ್ಲಿ ವಹಿಸಿದ್ದರು. ಕರ್ನಾಟಕ ಕೋಮುಸೌಹಾರ್ದ ವೇದಿಕೆಯ ಕೆ.ಎಲ್. ಅಶೋಕ ಮತ್ತಿತರರಿದ್ದರು.