ಕಲಂ 371 ತಿದ್ದುಪಡಿ ಮುಂದೆ ಅನೇಕ ಸವಾಲುಗಳಿವೆ: ನಿಗ್ಗುಡಗಿ
ಶಹಾಪುರ: ಈ ಭಾಗದ ಬಹು ದಿನಗಳ ಬೇಡಿಕೆಯಾದ ಸಂವಿಧಾನ 371ನೇ ಕಲಂ ತಿದ್ದುಪಡಿಯಾಗಿದೆ. ಆದರೆ ನಮ್ಮ ಮುಂದೆ ಅನೇಕ ಸವಾಲುಗಳಿವೆ ಎಂದು ಹೈದರಾಬಾದ-ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ನುಡಿದರು.
ಅವರು ಚರಬಸವೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಹೈ-ಕ ಯುವ ಬರಹಗಾರ ಬಳಗದ ವತಿಯಿಂದ ಹಮ್ಮಿಕೊಳ್ಳಲಾದ 'ಸಗರನಾಡ ನುಡಿಸಿರಿ' ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನಮಗೆ ಬೇಕಾದ ಪಾಲು ಸಿಕ್ಕಾಗ ಮಾತ್ರ ಈ ತಿದ್ದುಪಡಿ ಸಾರ್ಥಕವಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಗುಲ್ಬರ್ಗ ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿ, ಸುಮಾರು 17 ವರ್ಷಗಳಿಂದ ಸಾಹಿತ್ಯಿಕವಾಗಿ, ಸಾಂಪ್ರದಾಯಿಕವಾಗಿ, ಸೃಜನಶೀಲ ಮತ್ತು ರಚನಾತ್ಮಕ ಸಮಾಜ ಕಟ್ಟುವಲ್ಲಿ ಹೈ-ಕ ಯುವ ಬರಹಗಾರ ಬಳಗ ಉಪಯುಕ್ತ ಕೆಲಸ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ, ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಪಟ್ಟಣದ ವಿಮಲಾ ರೇವಣಸಿದ್ದಪ್ಪ ಕಲ್ಬುರ್ಗಿ ಅವರನ್ನು ಸನ್ಮಾನಿಸಿ, ಸಹಕಾರ ಬಂಧು ಪ್ರಶಸ್ತಿ ನೀಡಲಾಯಿತು. ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ ಅಧ್ಯಕ್ಷತೆ ವಹಿಸಿದರು.
ಬಳಗದ ಅಧ್ಯಕ್ಷ ಶಿವರಂಜನ ಸತ್ಯಂಪೇಟೆ ಮಾತನಾಡಿದರು. ನಂತರ ಸಾಣೇಹಳ್ಳಿಯ ಶಿವುಕುಮಾರ ಕಲಾ ಸಂಘದಿಂದ ಡಾ. ರಾಜಶೇಖರ ಹನುಮಲಿ ರಚಿತ ವೈ.ಡಿ. ಬದಾಮಿ ನಿರ್ದೇಶನದ ಮಹಾಬೆಳಗು ನಾಟಕ ಪ್ರದರ್ಶನ ನಡೆಯಿತು.